ಇದು ಥಳುಕು ಬಳುಕಿನ (fashion field) ಫ್ಯಾಶನ್ ಜಗತ್ತು. ಆಧುನೀಕರಣದ ಅಲೆ ಒಂದಿಡೀ ವೀಶ್ವವನ್ನೇ ಅಪಾದಮಸ್ತಕ ಆವರಿಸಿಕೊಂಡು ಬಿಟ್ಟಿದೆ. ಸಣ್ಣಪುಟ್ಟ ಪೇಟೆಗಳಿಂದ ಫರ್ಲಾಂಗು ದೂರದಲ್ಲಿರೋ ಹಳ್ಳಿಗಳಿಗೂ ಕೂಡಾ ಫ್ಯಾಶನ್ ಮಾಯೆ ಲಗ್ಗೆಯಿಟ್ಟಿದೆ. ಅದ್ಯಾರೋ ಸೆಲೆಬ್ರಿಟಿ, ಮಾಡೆಲ್ಲುಗಳು ಒಂದ್ಯಾವುದೋ ವಿನ್ಯಾಸದ ಬಟ್ಟೆ ಧರಿಸಿ ಓಡಾಡಿದರೆ, ದಿನ ಕಳೆಯೋದರೊಳಗೆ ಅದು ಹಳ್ಳಿಗಾಡುಜಗಳಲ್ಲಿಯೂ (fashion trends) ಟ್ರೆಂಡ್ ಸೆಟ್ ಮಾಡುತ್ತೆ. ಹಾಗೊಂದು ಫ್ಯಾಶನ್ ಊರು ತುಂಬಾ ಅಡ್ಡಾಡುತ್ತದಲ್ಲಾ? ಅದು ವರ್ಷಗಟ್ಟಲೆ ಚಾಲ್ತಿಯಲ್ಲಿರುತ್ತೆ ಅಂದುಕೊಳ್ಳುವಂತಿಲ್ಲ. ಯಾಕಂದ್ರೆ, ಹೀಗೆ ಟ್ರೆಂಡ್ ಸೆಟ್ (trend setter fashion) ಮಾಡೋ ವಿನ್ಯಾಸಗಳ ಆಯಸ್ಸು ದಿನಗಳ ಲೆಕ್ಕದಲ್ಲಿರುತ್ತೆ. ಒಂದು ಟ್ರೆಂಡಿನ ತಲೆಗೆ ಬಾರಿಸಿದಂತೆ ಮತ್ತೊಂದು ಫ್ಯಾಶನ್ ಜುಟ್ಟು ಕೆದರಿಕೊಂಡು ಊರುತುಂಬಾ ಮೆರೆಯಲು ಶುರುವಿಟ್ಟುಕೊಳ್ಳುತ್ತೆ. ಹಾಗಾದ್ರೆ, ಒಂದು ವಿನ್ಯಾಸ ಟ್ರೆಂಡಾದಾಗ ಟನ್ನುಗಟ್ಟಲೆ ಬಟ್ಟೆ ರೆಡಿಯಾಗುತ್ತಲ್ಲಾ? ಅದೆಲ್ಲ ಸೇಲ್ ಆಗುತ್ತಾ? ಒಂದು ವೇಳೆ ಆಗದೇ ಹೋದ್ರೆ ಔಟ್ ಡೇಟೆಡ್ ಅನ್ನಿಸಿಕೊಳ್ಳೋ ಅಂಥಾ ಬಟ್ಟೆಗಳ ಕಥೆ ಏನಾಗುತ್ತೆ? ಇಂಥಾ ಪ್ರಶ್ನೆಗಳನ್ನಿಟ್ಟುಕೊಂಡು ತಲಾಶಿಗಿಳಿದರೆ ಬೆಚ್ಚಿಬೀಳಿಸಬಲ್ಲ ಜಾಗತಿಕ ಮಟ್ಟದ (dark secrets) ಫ್ಯಾಶನ್ ಜಗತ್ತಿನ ಡಾರ್ಕ್ ಸೀಕ್ರೆಟ್ ಒಂದು ಜಾಹೀರಾಗುತ್ತೆ!
ಇದು ಡಾರ್ಕ್ ಸೀಕ್ರೆಟ್
ಸಾಮಾನ್ಯವಾಗಿ ಫ್ಯಾಶನ್ ಜಗತ್ತಿನ ಬಗ್ಗೆ ಆಸಕ್ತಿ ಇರುವವರು, ಅದರ ಬಗೆಗೊಂದು ಬೆರಗಿಟ್ಟುಕೊಂಡವರು ಅದರೊಳಗಿನ ವಿಚಾರಗಳನ್ನ ಕೆದಕುತ್ತಾರೆ. ಈವತ್ತಿಗೆ ಫ್ಯಾಶನ್, ಮಾಡೆಲಿಂಗ್ ಅನ್ನೋದು ಕೋಟಿಗಟ್ಟಲೆ ವ್ಯವಹಾರ ನಡೆಸೋ ಜಾಗತಿಕ ಮಟ್ಟದ ಉದ್ಯಮ. ಸುಮ್ಮನೊಮ್ಮೆ ಕ್ಯಾಟ್ ವಾಕ್ ಮಾಡಿ ಕೋಟಿ ಕೋಟಿ ಬಾಚಿಕೊಳ್ಳುವವರು ಆ ಜಗತ್ತಿನಲ್ಲಿದ್ದಾರೆ. ಆಯಕಟ್ಟಿನ ಜಾಗೆಗಳಲ್ಲಿ ಇವೆಂಟುಗಳನ್ನು ಆಯೋಜಿಸುವ ಮೂಲಕ ರಾತ್ರಿ ಬೆಳಗಾಗೋದರೊಳಗಾಗಿ ತಿಜೋರಿ ತುಂಬಿಸಿಕೊಳ್ಳುವ ಹೈಫೈ ಕುಳಗಳಿಗೂ ಅಲ್ಲಿ ಕೊರತೆಯೇನಿಲ್ಲ. ನಿಖರವಾಗಿ ಹೇಳಬೇಕೆಂದರೆ, ಅದೊಂದು ಮಾಯಾ ಜಗತ್ತು. ಸಿನಿಮಾ ಉದ್ಯಮವನ್ನೇ ಮೀರಿ ಬೆಳೆದು ನಿಂತಿರುವ ವ್ಯವಹಾರವೂ ಹೌದು.
ಇಂಥಾ ರಂಗೀನ್ ದುನಿಯಾದ ಡಾರ್ಕ್ ಸೀಕ್ರೆಟ್ ಗಳ ಬಗ್ಗೆ ಆಗಾಗ ಸುದ್ದಿಯಾಗೋದಿದೆ. ಅದರ ಗರ್ಭದಿಂದ ಹೊರ ಬರುವ ಒಂದಷ್ಟು ವಿವಾದಗಳು ಸಣ್ಣ ಸಣ್ಣ ಸುದ್ದಿಯ ತುಣುಕುಗಳಾಗಿ ಕಳೆದು ಹೋಗೋದೇ ಹೆಚ್ಚು. ಒಂದು ವೇಳೆ ಯಾರಾದರೂ ಫ್ಯಾಶನ್ ಲೋಕದತ್ತ ವಾಸ್ತವದ ಕನ್ನಡಿ ಹಿಡಿದರೆ, ಹೊರ ಜಗತ್ತಿಗೆ ಗೊತ್ತೇ ಆಗದಂತೆ ಅದನ್ನು ಪುಡಿಗಟ್ಟಬಲ್ಲಷ್ಟು ಈ ಉದ್ಯಮ ಮಾಫಿಯಾ ಸ್ವರೂಪ ಪಡೆದುಕೊಂಡಿದೆ. ಅದರ ಆಳದಲ್ಲಿ ಹೆಣ್ಣುಮಕ್ಕಳ ಶೋಷಣೆ, ಅದಕ್ಕೆ ತಳುಕು ಹಾಕಿಕೊಂಡಿರುವ ದಂಧೆಗಳಿವೆ ಅನ್ನೋದು ಈಗಾಗಲೇ ಜಗಜ್ಜಾಹೀರಾಗಿದೆ. ಹೀಗೆ ಫ್ಯಾಶನ್ ಜಗತ್ತನ್ನ ಆವರಿಸಿಕೊಂಡಿರುವ ನಾನಾ ವ್ಯವಹಾರಗಳ ಜೊತೆಗೆ ಕಸವೂ ಸೇರಿಕೊಂಡಿದೆ ಅನ್ನೋ ಕಟು ವಾಸ್ತವ ಬಹುಶಃ ಬಹತೇಕರನ್ನ ಬೆರಗುಗೊಳಿಸಬಹುದು. ಅದು ಜಗತ್ತಿನ ನಾನಾ ಭಾಗಗಳಲ್ಲಿ ನಡೆಸುತ್ತಿರೋ ಪ್ರಕೃತಿಯ ಮೇಲಿನ ಪ್ರಹಾರ, ಇನ್ನೊಂದಷ್ಟು ವರ್ಷಗಳ ಕಾಲ ಈ ವಿಶ್ವವನ್ನು ನಾನಾ ದಿಕ್ಕಿನಲ್ಲಿ ನರಳಿಸಬಲ್ಲಂಥಾ ಮಾಲೀನ್ಯದ ಕಥೆ ನಿಜಕ್ಕೂ ಭೀಕರವಾಗಿದೆ!
ನೀವು ಆಲೋಚಿಸಿರಲಿಕ್ಕಿಲ್ಲ… ಪ್ರತೀ ವರ್ಷ ಈ ಜಗತ್ತಿನಲ್ಲಿ ಎಷ್ಟು ಪ್ರಮಾಣದಲ್ಲಿ ಜೀನ್ಸ್ ಪ್ಯಾಂಟ್, ಶರ್ಟ್ ಸೇರಿದಂತೆ ನಾನಾ ಉಡುಪುಗಳು ತಯಾರಾಗುತ್ತವೆ? ಅದರಲ್ಲಿ ಎಷ್ಟು ಮಾರಾಟವಾಗುತ್ತವೆ? ಈ ವೇಗದ ದುನಿಯಾದಲ್ಲಿ ಔಟ್ ಡೇಟೆಡ್ ಆದ ವೆರೈಟಿಯ ಬಟ್ಟೆಬರೆಗಳನ್ನ ಏನು ಮಾಡಲಾಗುತ್ತೆ? ಈ ದಿಕ್ಕಿನಲ್ಲಿ ಆಲೋಚಿಸಿದರೆ, ನಿಜಕ್ಕೂ ಅಚ್ಚರಿಯಾಗುತ್ತೆ. ಅದಕ್ಕೆ ಸಿಕ್ಕಬಹುದಾದ ವಾಸ್ತವಿಕ ಉತ್ತರ ಮಾತ್ರ ಅಕ್ಷರಶಃ ಬೆಚ್ಚಿಬೀಳಿಸುತ್ತೆ. ಮೊದಲಿಗೇ ಹೇಳಬೇಕಾದ ಒಂದು ಅಂಶವಿದೆ. ಯಾವುದೇ ಥರದ ಬಟ್ಟೆಗಳು ಮತ್ತು ಅದರ ತ್ಯಾಜ್ಯಗಳು ಭೂಮಿಗೆ ಸೇರಿದರೆ, ಅದು ಒಟ್ಟಾರೆ ಭೂಮಿಯ ಸ್ಥಿತಿಗತಿಗಳನ್ನೇ ಬದಲಾಯಿಸುತ್ತೆ. ಈ ವಾತಾವರಣದಲ್ಲಿ ಗಣನೀಯ ಪ್ರಮಾಣದಲ್ಲಿ ಇಂಗಾಲದ ಅಂಶ ಏರಿಕೆಯಾಗುತ್ತೆ. ಇದೂ ಸೇರಿದಂತೆ ಅನೇಕಾನೇಕ ವ್ಯತಿರಿಕ್ತ ಪರಿಣಾಮವನ್ನು ಪ್ರಕೃತಿ ಸಹಿಸಿಕೊಳ್ಳಬೇಕಾಗುತ್ತೆ. ಅಂಥಾ ಸಹಿಸುವಿಕೆ ಮೀರಿದರೆ ಭೂಕುಸಿತವೂ ಸೇರಿದಂತೆ ನಾನಾ ವಿಕೋಪಗಳು ಸಂಭವಿಸಿದರೂ ಅಚ್ಚರಿಯೇನಿಲ್ಲ.
ಈ ಬಗ್ಗೆ ಇದುವರೆಗೂ ಪರಿಸರಾಸ್ತಕ ಮಂದಿ ನಾನಾ ದಿಕ್ಕಿನಲ್ಲಿ ತಲಾಶು ನಡೆಸಿದ್ದಾರೆ. ವಿಶ್ವದ ನಾನಾ ಭಾಗಗಳಲ್ಲಿ ಸಮೀಕ್ಷೆ ನಡೆಸುವ ಮೂಲಕ ಸತ್ಯಕ್ಕೆ ಹತ್ತಿರಾದ ಒಂದಷ್ಟು ಅಂಕಿ ಅಂಶಗಳನ್ನು ಕಲೆ ಹಾಕಿದ್ದಾರೆ. ಆ ಅಂಕಿ ಅಂಶದ ಪ್ರಕಾರವಾಗಿ ಹೇಳೋದಾದರೆ ಎಂಬತ್ತರಿಂದ ನೂರೈವತ್ತು ಬಿಲಿಯನ್ ಟನ್ನಿಗೂ ಅಧಿಕೆ ಬಟ್ಟೆ ಬರೆಗಳು ಉತ್ಪಾದನೆಯಾಗುತ್ತವೆ. ಹಾಗಾದರೆ ಅದರಲ್ಲಿ ಎಷ್ಟು ಪ್ರಮಾಣದ ಬಟ್ಟೆಗಳು ಬಿಕರಿಯಾಗುತ್ತವೆ? ಇದು ಮುಖ್ಯ ಪ್ರಶ್ನೆ. ಇದಕ್ಕೂ ಕೂಡಾ ಈ ಈ ಸಮೀಕ್ಷೆಯಲ್ಲಿ ಉತ್ತರ ಕಂಡುಕೊಳ್ಳಲಾಗಿದೆ. ಈ ಒಟ್ಟಾರೆ ಉತ್ಪಾದನೆಯಲ್ಲಿ ಶೇಖಡಾ ನಲವತ್ತರಷ್ಟು ಬಟ್ಟೆಗಳು ಮಾತ್ರವೇ ಪ್ರತೀ ವರ್ಷ ಸೇಲಾಗುತ್ತವೆ. ಮಿಕ್ಕುಳಿದವುಗಳು ನಾನಾ ಭಾಗಗಳ ಗೋದಾಮುಗಳಲ್ಲಿ ಬೂಸ್ಟು ಹಿಡಿಯುತ್ತವೆ. ಕಡಿಮೆ ಬೆಲೆಗೆ ಸೇಲ್ ಮಾಡೋ ಸರ್ಕಸ್ಸುಗಳಾಚೆಗೂ ಪ್ರತೀ ವರ್ಷ ಶೇಖಡಾ ಐವತ್ತರಷ್ಟು ಪ್ರಮಾಣದ ಬಟ್ಟೆಗಳು ಉಳಿದು ಬಿಡುತ್ತವೆ.
ಬಟ್ಟೆಗಳ ಕಸದ ಲೋಕ
ಇತ್ತೀಚಿನ ವರ್ಷಗಳಲ್ಲಂತೂ ಆ ಪ್ರಮಾಣ ಮತ್ತಷ್ಟು ಏರಿಕೊಂಡಿದೆ. ಯಾಕಂದ್ರೆ, ಈಗ ಒಂದು ಬಟ್ಟೆ ತೆಗೆದುಕೊಂಡರೆ ಅದನ್ನು ವರ್ಷಗಟ್ಟಲೆ ಹಾಕಿ ಸವೆಸುವ ಟ್ರೆಂಡೇ ಬದಲಾಗಿದೆ. ಈವತ್ತು ಕೊಂಡ ಬಟ್ಟೆ ವಾರ ಕಳೆಯೋವಷ್ಟರಲ್ಲಿ ಹಳತಾಗುತ್ತೆ. ಆನಸಾಮಾನ್ಯರೂ ಕೂಡಾ ಅಂಥಾ ಹೊಸಾ ಟ್ರೆಂಡಿನ ಶೋಕಿಗೆ ಒಲಗ್ಗಿಕೊಂಡಿದ್ದಾರೆ. ಈ ಕಾರಣದಿಂದಲೇ ಮತ್ತೊಂದಷ್ಟು ಹೊಸಾ ಡಿಸೈನಿನ ಬಟ್ಟೆಗಳ ಟನ್ನುಜಗಟ್ಟಲೆ ಉತ್ಪಾದನೆಯಾಗುತ್ತವೆ. ಇಲ್ಲೀಗ ಬೇಗನೆ ಟ್ರೆಂಡ್ ಬದಲಾಗೋದರಿಂದಾಗಿ ಅವೆಲ್ಲವೂ ಹಳೆಯದಾಗುತ್ತವೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಬಟ್ಟೆಗಳ ಒಟ್ಟಾರೆ ಉತ್ಪಾದನೆ ಹೆಚ್ಚಾಗಿದೆ. ಆ ಕಾರಣದಿಂದಲೇ ಗೋದಾಮಿನಲ್ಲಿ ಬಿಕರಿಯಾಗದೆ ಕೊಳೆಯುವ ಬಟ್ಟೆಗಳ ಪ್ರಮಾಣವೂ ಹೆಚ್ಚಿಕೊಂಡಿದೆ.
ಘಾನಾ ದೇಶದ ಪರಿಸರಾಸಕ್ತ ಸಂಘಟನೆಯೊಂದು ಬಹು ವರ್ಷಗಳಿಂದ ಫ್ಯಾಷನ್ ಜಗತ್ತಿನ ತ್ಯಾಜ್ಯ ಮತ್ತು ಅದರಿಂದಾಗೋ ಪರಿಣಾಮಗಳ ಬಗ್ಗೆ ಅವ್ಯಾಹತವಾದ ಶೋಧನೆಗಳನ್ನು ನಡೆಸುತ್ತಾ ಬಂದಿದೆ. ಅದರ ಮುಖ್ಯಸ್ಥರು ಈ ಬಗೆಗಿನ ಒಂದಷ್ಟು ಆತಂಕಕಾರಿ ಅಂಶಗಳನ್ನು ಕಲೆ ಹಾಕಿದ್ದಾರೆ. ಈ ಸಂಸ್ಥೆ ಬಟ್ಟೆ ಉತ್ಪಾದಕಾ ಘಟಕಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕೆಂಬುದ್ರ ಬಗ್ಗೆ ಅಭಿಯಾನ ನಡೆಸುತ್ತಾ ಬಂದಿದೆ. ಆದರೆ ತೀರಾ ಸಣ್ಣ ಪ್ರಮಾಣದಲ್ಲಿ ಉದ್ಯಮಿಗಳು ಅದಕ್ಕೆ ಸ್ಪಂಣದಿಸಿದ್ದಾರೆ. ಯಾಕಂದ್ರೆ, ತೀರಾ ಪಾರದರ್ಶಕವಾದರೆ ವಹಿವಾಟಿಗೆ ಕುಂದುಂಟಾಗಿ ಬೇಡದ ಸವಾಲುಗಳಿಗೆ ತೆರೆದುಕೊಳ್ಳಬೇಕಾದೀತೆಂಬ ಭಯ ಉದ್ಯಮಿಗಳಲ್ಲಿದೆ.
ಈ ಸಂಸ್ಥೆ ಬಟ್ಟೆ ಉತ್ಪಾದಕ ಸಂಸ್ಥೆಗಳನ್ನು ಸಂಪರ್ಕಿಸಿ ಪ್ರತೀ ವರ್ಷ ಎಷ್ಟು ಉತ್ಪಾದನೆ ಮಾಡುತ್ತೀರೆಂಬ ಬಗ್ಗೆ ನಿಖರವಾದ ಉತ್ತರ ಬಯಸಿದೆ. ಆದರೆ ಬಹುತೇಕ ಉದ್ಯಮಿಗಳು ಅದಕ್ಕೆ ಉತ್ತರ ನೀಡಲು ಹಿಂದೇಟು ಹಾಕಿದ್ದಾರೆ. ಒಂದು ವೇಳೆ ಉತ್ತರಿಸಿದರೆ ಅದರಲ್ಲಿಯೇ ಫ್ಯಾಶನ್ ಉದ್ಯಮದ ಕೊಳಕು ವೃತ್ತಾಂತ ಕೂಡಾ ಜಾಹೀರಾಗಿ ಬಿಡುತ್ತದೆಂಬ ಅಳುಕು ಅವರಲ್ಲಿದ್ದಂತಿದೆ. ಸಾಮಾನ್ಯವಾಗಿ ಇಂಥಾ ಬಟ್ಟೆ ಕಂಪೆನಿಗಳು ತಮ್ಮ ಉತ್ಪನ್ನಗಳು ಹೆಚ್ಚೆಚ್ಚು ಸೇಲಾಗಿದೆ ಎಂಬಂರ್ಥದಲ್ಲಿಯೇ ತೋರಿಸಿಕೊಳ್ಳುತ್ತವೆ. ಅದು ಬ್ಯುಸಿನೆಸ್ ಟ್ರಿಕ್ಸ್. ಒಂದು ವೇಳೆ ತಾವು ಸೃಷ್ಟಿಸಿದ ಬಟ್ಟೆಗಳಲ್ಲಿ ಬಹುಪಾಲು ಹಾಗೇ ಉಳಿದಿಉವೆ ಅನ್ನೋ ಸತ್ಯ ಜನರಿಗೆ ಗೊತ್ತಾದರೆ ಒಟ್ಟಾರೆ ವಹಿವಾಟಿಗೆ ಬಲವಾದ ಪೆಟ್ಟು ಬೀಳೋದು ಗ್ಯಾರೆಂಟಿ. ಈ ಕಾರಣದಿಂದಲೇ ಗೋಡಾನಿನಲ್ಲಿ ಮಕೊಳೆಯವ ಬಟ್ಟೆಗಳನ್ನ ಗೌಪ;ಯವಾಗಿಟ್ಟು, ಅದನ್ನು ಸೀಕ್ರೆಟ್ ಪ್ಲೇಸುಗಳಲ್ಲಿ ಸುರಿದು ಗಬ್ಬೆಬ್ಬಿಸುವ ಕೆಲಸ ಬಹು ಕಾಲದಿಂದಲೂ ನಡೆದುಕೊಂಡು ಬಂದಿದೆ.
ಬ್ರಾಂಡೆಡ್ ಕೊಳಕು
ಇಂಥಾದ್ದೊಂದು ಕೊಳಕು ವೃತ್ತಾಂತ ಬ್ರಾಂಡೆಡ್ ಬಟ್ಟೆ ಉತ್ಪಾದಕ ವಲಯವನ್ನು ಆವರಿಸಿಕೊಂಡಿದೆ. ಇಂಥಾ ಬಟ್ಟೆ ಕಂಪೆನಿಗಳು ನೇರವಾಗಿ ಮಾಡೆಲಿಂಗ್, ಫ್ಯಾಶನ್ ಜಗತ್ತನ್ನು ನೆಚ್ಚಿಕೊಂಡಿವೆ. ಅಷ್ಟಕ್ಕೂ ಮಾಡೆಲಿಂಗ್ ಎಂಬ ಬಹುಕೋಟಿ ಉದ್ಯಮ ನಡೆಯುತ್ತಿರೋದೇ ಇಂಥಾ ಬ್ರಾಂಡ್ ಕಂಪೆನಿಗಳಿಂದ. ಮಾಡೆಲಿಂಗ್ ಮೂಲಕ ಇಂಥಾ ಕಂಪೆನಿಗಳು ಹೊಸಾ ಡಿಸೈನುಗಳನ್ನು ಪರಿಚಯಿಸುತ್ತೆ. ಆದರೆ, ಅದರಿಂದಾಗಿ ಕೊಳ್ಳುವವರ ಸಂಖ್ಯೆ ಎಷ್ಟು ಮಟ್ಟದಲ್ಲಿ ವೃದ್ಧಿಯಾಗುತ್ತದೆ ಅನ್ನೋದನ್ನು ಅಂದಾಜಿಸುವಲ್ಲಿ ಬಹುತೇಕ ಉದ್ಯಮಿಗಳು ಎಡವುತ್ತಿದ್ದಾರೆ. ಈ ಕಾರಣದಿಂದಲೇ ಬೇಡಿಕೆಗಿಂದ ದುಪ್ಪಟ್ಟು ಉತ್ಪನ್ನಗಳನ್ನು ಸಿದ್ಧಪಡಿಸುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ಬಾಕಿ ಉಳಿದ ಬಟ್ಟೆಗಳು ಸಹಜವಾಗಿಯೇ ಕಸವಾಗಿ ಮಾರ್ಪಾಟಾಗುತ್ತೆ. ಆ ಕಸವೆಲ್ಲವೂ ಭೂಮಿಯ ಮೇಲೆ ಹರಡಿಕೊಂಡು ಸರ್ವನಾಶಕ್ಕೆ ಸನ್ನದ್ಧವಾಗಿದೆ.
ಈ ಬಟ್ಟೆ ಉದ್ಯಮ ಬರೀ ಕಸವನ್ನಷ್ಟೇ ಸೃಷ್ಟಿಸುತ್ತಿದೆ ಅಂದರೆ ತಪ್ಪಾಗುತ್ತೆ. ಅದು ಈ ಜಗತ್ತಿನಲ್ಲಿ ಉದ್ಯೋಗಾವಕಾಶ ಸೃಷ್ಟಿಸಿದೆ. ಈ ಬಟ್ಟೆ ತಯಾರಾಗೋದರ ಹಿಂದೆ ಕೋಟ್ಯಾಂತರ ಮಾನವ ಶ್ರಮವಿದೆ. ಹತ್ತಿ ಬೆಳೆದು, ಅದರಿಂದ ನೂಲು ತೆಗೆಯೋದರ ತನಕ ಬಟ್ಟೆ ತಯಾರಿಯ ಹಿಂದೆ ಬೆವರ ವೃತ್ತಾಂತವಿದೆ. ಆದರೆ ಒಂದು ಘಟ್ಟದಲ್ಲಿ ಕೆಲ ಕಂಪೆನಿಗಳ ಅತಿಯಾಸೆಯೇ ಆ ಶ್ರಮವನ್ನೆಲ್ಲ ವಿನಾ ಕಾರಣ ಕಸವನ್ನಾಗಿಸಿ, ಅದರ ಮೂಲಕ ಈ ಪ್ರಕೃತಿಗೆ ಮಹಾ ದ್ರೋಹವೆಸಗುತ್ತಿದೆ. ಇಂಥಾ ಕಂಪೆನಿಗಳು ಅಗತ್ಯಕ್ಕಿಂತ ಹೆಚ್ಚು ಉತ್ಪಾದಿಸಿ, ನಾನಾ ಗಿಲೀಟು ಮಾಡಿ ಮಾರತಾಟವಾಗುವಂತೆ ನೋಡಿಕೊಂಡು ಬಚಾವಾಗುತ್ತವೆ. ಆದರೆ, ಜನರನ್ನು ತಲುಪೋ ಹಾದಿಯಲ್ಲಿ ಅಂಥಾ ಬಟ್ಟೆಗಳು ಎಲ್ಲೆಲ್ಲಿಯೋ ಉಳಿದು ತ್ಯಾಜ್ಯವಾಗಿ ಮಾರ್ಪಾಟಾಗುತ್ತದೆ. ಈವತ್ತಿಗೂ ರೀಸೈಕಲ್ ಆಗಬಹುದಾದ ಬಟ್ಟೆಗಳ ಸಂಖ್ಯೆ ಕಡಿಮೆ ಇದೆ. ಈ ಕಾರಣದಿಂದಲೇ ಭೂಮಿ ಸೇರೋ ಕಸದ ಪ್ರಮಾಣ ಅತಿಯಾಗಿದೆ.
ಬಟ್ಟೆ ಎಷ್ಟು ಡೇಂಜರಸ್ ಗೊತ್ತಾ?
ಹಾಗಂತ ಇಂಥಾ ಬಟ್ಟೆಗಳನ್ನು ಹೆಚ್ಚು ಉತ್ಪಾದಿಸಿ, ಅದು ಮಾರಾಟವಾಗದೆ ಉಳಿದ ಕಾರಣದಿಂದ ಮಾತ್ರವೇ ಕಸ ಸೃಷ್ಟಿಯಾಗುತ್ತೆ ಅಂದುಕಲೊಳ್ಳುವಂತಿಲ್ಲ. ವಿನಾ ಕಾರಣ ಅತಿಯಾದ ಬಳಕೆ ಕೂಡಾ ಪ್ರಕೃತಿಯನ್ನು ರಾಡಿಯೆಬ್ಬಿಸುತ್ತಿದೆ ಅನ್ನೋ ಸತ್ಯವನ್ನು ಇದುವರೆಗಿನ ಅಂಕಿ ಅಂಶಗಳು ಸಾರಿ ಹೇಳುತ್ತಿವೆ. ಯಾವುದೋ ದೇಶದ ಯಾವುದೋ ಭಾಗದಲ್ಲಿ ಬಟ್ಟೆ ತಯಾರಕ ಕಂಪೆನಿಗಳು, ಗಾರ್ಮೆಟುಗಳಿರುತ್ತವೆ. ಅವುಗಳಿಂದ ಬರೋ ಕಸ ಆಸುಪಾಸಿನ ಭೂಮಿ ಸೇರುತ್ತೆ ಅಂದುಕೊಳ್ಳುವಂತಿಲ್ಲ. ಅವು ಕೊಳ್ಳುಬಾಕ ಸಂಸ್ಕೃತಿಯ ಫಲವಾಗಿ ವಿಶ್ವದ ಮೂಲೆ ಮೂಲೆಗೂ ಹಬ್ಬಿಕೊಂಡು ಪ್ರಕೃತಿಯನ್ನು ಹಾಳು ಮಾಡುತ್ತಿವೆ. ಇದಕ್ಕೆ ಕಾರಣವಾಗಿರೋದು ಬಟ್ಟೆ ಉದ್ಯಮಗಳ ಅತಿ ಆಸೆ.
ಯಾಕೆಂದರೆ, ಇಂಥಾ ಕಂಪೆನಿಗಳು ಅಗತ್ಯಕ್ಕಿಂತಲೂ ಹೆಚ್ಚು ಬಟ್ಟೆ ತಯಾರಿಸುತ್ತವೆ. ಅವು ಸೇಲಾಗದೇ ಉಳಿದಾಗ ಮಾಡೆರಂಗ್, ಫ್ಯಾಶನ್ ಜಗತ್ತಿನ ಮೂಲಕ ಬಿಕರಿ ಮಾಡಲು ಹವಣಿಸುತ್ತವೆ. ಅದರಲ್ಲಿಯೂ ನಿರೀಕ್ಷಿತ ಫಲಿತಾಂಶ ಬಾರದಿದ್ದಾಗ ಡಿಸ್ಕೌಂಟ್ ಸೇಲಿನಂಥಾ ತಂತ್ರಕ್ಕಿಳಿಯುತ್ತವೆ. ಯಾವಾಗ ಕಡಿಮೆ ಬೆಲೆಯಲ್ಲಿ ಸಿಗುತ್ತದೋ ಆಗ ಮಂದಿ ಅಗತ್ಯಕ್ಕಿಂತಲೂ ಹೆಚ್ಚು ಬಟ್ಟೆಗಳನ್ನು ಖರೀದಿಸುತ್ತಾರೆ. ಇದರಿಂದ ಉತ್ಪಾದಕ ಕಂಪೆನಿಗಳಿಗೆ ಯಾವ ರೀತಿಯಿಂದಲೂ ನಷ್ಟವಾಗೋದಿಲ್ಲ. ನಷ್ಟವಾಗೋದು ಈ ಪ್ರಕೃತಿಯ ತಾಜಾತನಕ್ಕೆ ಮಾತ್ರ. ಈ ಕಾರಣದಿಂದಲೇ ಉದ್ಯಮಿಗಳ ಅತಿಯಾಸೆಗೆ ಬ್ರೇಕ್ ಹಾಕೋ ಪ್ರಯತ್ನವನ್ನು ವಿಶ್ವದ ನಾನಾ ದೆಏಶಗಳ ಪರಿಸರಪ್ರಿಯ ಸಂಘಟನೆಗಳು ಮಾಡಿಕೊಂಡು ಬರುತ್ತಿದ್ದಾವೆ.
ಪ್ರಕೃತಿಯ ಮರಣ ಶಾಸನ
ಈ ಬಟ್ಟೆ ಉದ್ಯಮದ ಕೆಡುಕುಗಳು ಕಸಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಇದರ ಉತ್ಪಾದನೆಯ ಸಂದರ್ಭದಲ್ಲಾಗುವ ವಿಕಿರಣಗಳು ಕೂಡಾ ಪ್ರಕೃತಿಗೆ ಮಾರಕ. ಇದರ ಪರಿಣಾಮ ಎಂಥಾದ್ದಿದೆ ಅಂದ್ರೆ ಈಗಾಗಲೇ ಜಿ೨೦ ಶೃಂಗಸಭೆಯಲ್ಲಿಯೂ ಕೂಡಾ ಈ ಬಗ್ಗೆ ಗಂಭೀರವಾದ ಚರ್ಚೆಗಳು ನಡೆದಿವೆ. ಈ ಸಂದರ್ಭದಲ್ಲಿ ಹೇಗಾದರೂ ಮಾಡಿ ಜಾಗತಿಕ ಮಟ್ಟದಲ್ಲಿ ಬಟ್ಟೆ ಉತ್ಪಾದನಾ ಪ್ರಮಾಣಕ್ಕೆ ಕಡಿವಾಣ ಹಾಕದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಅಭಿಪ್ರಾಯವೂ ಹೊಮ್ಮಿಕೊಂಡಿದೆ. ಇದೇ ಶೃಂಗ ಸಭೆಯಲ್ಲಿ ಪ್ರತೀ ದೇಶಗಳೂ ಕೂಡಾ ಬಟ್ಟೆಯ ಅತಿಯಾದ ಉತ್ಪಾದನೆ, ಅದರಿಂದ ಸೃಷ್ಟಿಯಾಗೋ ಟನ್ನುಗಟ್ಟಲೆ ಕಸಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲೇ ಬೇಕೆಂಬ ನಿರ್ಧಾರಕ್ಕೆ ಬರಲಾಗಿದೆ. ಆದರೆ, ಅದು ಕಾರ್ಯರೂಪಕ್ಕೆ ಬರೋದು ಅಷ್ಟು ಸಲೀಸಿನ ವಿಚಾರವಲ್ಲ. ಅದೆಲ್ಲ ಆಗುವ ಹೊತ್ತಿಗೆ ಪ್ರಕೃತಿಯ ಮೇಲೆ ಮತ್ತೊಂದಷ್ಟು ಪ್ರಹಾರ ಖಂಡಿತವಾಗಿಯೂ ನಡೆದಿರುತ್ತದೆ.
ಒಂದು ಅಂದಾಜಿನ ಪ್ರಕಾರ ಮುಂದಿನ ಹತ್ತತು ವರ್ಷಗಳಲ್ಲಿ ಬಟ್ಟೆ ಉತ್ಪಾದನಾ ಪ್ರಮಾಣ ಇನ್ನು ಹತ್ತು ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗುತ್ತೆ. ಅದಕ್ಕೆ ಕಡಿವಾಣ ಹಾಕಲು ಯುರೋಪಿಯನ್ ದೇಶಗಳು ಮುಂದಾಗುತ್ತಿವೆ. ಹೀಗೆ ಊರು ತುಂಬಾ ಕಸ ಸುರಿದು ಗಬ್ಬೆಬ್ಬಿಸುತ್ತಿರೋ ಈ ಫ್ಯಾಶನ್ ಉದ್ಯಮದ ಒಡಲಿನಲ್ಲಿ ನಾನಾ ಹುಳುಕುಗಳಿದ್ದಾವೆ. ಅದರಲ್ಲಿ ಪ್ರಭಾವ, ಹಣ ಇರುವವರು ಮಾತ್ರವೇ ವ್ಯಾಪಕವಾಗಿ ಲಾಭ ಗೋರಿಕೊಳ್ಳುತ್ತಿದ್ದಾರೆ. ಇದೊಂದು ಸುಲಭಕ್ಕೆ ಅಂದಾಜಿಸಲು ಕಷ್ಟವಾಗುವ ಮಟ್ಟಕ್ಕಿರುವ ಉದ್ಯಮ. ಅದರೊಳಗಿನ ರಾಜಕೀಯ ಹೇಗಿದೆಯೆಂದರೆ, ಅಷ್ಟೂ ಲಾಭವನ್ನು ಜಾಗತಿಕ ಮಟ್ಟದಲ್ಲಿ ಪಡೆದುಕೊಳ್ಳುತ್ತಿರೋದು ಕೇವಲ ಇಪ್ಪತ್ತು ಕಂಪೆನಿಗಳು ಮಾತ್ರ ಅನ್ನೋದು ನಿಜಕ್ಕೂ ಅಚ್ಚರಿಯ ವಿಚಾರ.
ಇನ್ನುಳಿದಂತೆ, ಈ ಫ್ಯಾಶನ್ ಜಗತ್ತು ಮತ್ತು ಬಟ್ಟೆ ಉದ್ಯಮ ನಿಂತಿರೋದೇ ಮಾಡೆಲಿಂಗ್ ಮೂಲಕ. ನಮ್ಮಲ್ಲಿ ಮಾಡೆಲಿಂಗ್ ಮಾಡಿ ಸ್ಟಾರ್ ಆಗಿ ಮಿಂಚಬೇಕನ್ನೋ ಕನಸು ಹೊಂದಿರತುವ ಅದೆಷ್ಟೋ ಯುವಕ ಯುವತಿಯರಿದ್ದಾರೆ. ನೀವು ಗಮನಿಸಿರಬಹುದು; ಅದೆಷ್ಟೋ ನಾಯಕಿಯರು ಸಿನಿಮಾರಂಗಕ್ಕೆ ಎಂಟ್ರಿ ಕೊಡೋದೇ ಈ ಮಾಡೆಲಿಂಗ್ ಕ್ಷೇತ್ರದ ಮೂಲಕ. ಮಾಡೆಲಿಂಗ್ ಅನ್ನೋದು ಸಿನಿಮಾ ನಟಿಯಾಗೋದರ ಪ್ರಥಮ ಹೆಜ್ಜೆ ಎಂಬಂಥಾ ನಂಬಿಕೆಗಳೂ ಇವೆ. ಆದರೆ, ಅಂಥಾ ಜಗತ್ತಿನಲ್ಲಿ ಹೆಣ್ಣುಮಕ್ಕಳನ್ನು ಥರ ಥರದಲ್ಲಿ ಕಾಡುವ ಕಾಮ ಪಿಪಾಸುಗಳಿದ್ದಾರೆಂಬ ವಿಚಾರ ಆಗಾಗ ಜಾಹೀರಾಗುತ್ತದೆ. ಇಲ್ಲಿ ಅದೆಷ್ಟು ಅಮಾನವೀಯ ವಾತಾವರಣವಿದೆ ಎಂದರೆ, ಮಾಡೆಲ್ ಒಬ್ಬಳು ರ್‍ಯಾಂಪ್ ವಾಕ್ ಮಾಡುವಾಗ ಕುಸಿದು ಬಿದ್ದು ಸತ್ತರೂ ಅದನ್ನೊಂದು ಸೂತಕವಾಗಿ ಪರಿಭಾವಿಸುವ ಮನುಷ್ಯತ್ವವೇ ಮರೆಯಾಗೋದೂ ಇದೆ. ಇಂಥಾ ಅನೇಕ ದುರಂತ ಸಾವುಗಳು ಈ ಜಗತ್ತಿನಲ್ಲಿ ನಡೆದಿದೆ ಅನ್ನಲಾಗುತ್ತದೆ.
ಮಾಡೆಲಿಂಗ್ ಮಂಕುಬೂದಿ
ಈ ಮಾಡೆಲಿಂಗ್ ಜಗತ್ತಿನಲ್ಲಿ ಜನರನ್ನು ಹಂತ ಹಂತವಾಗಿ ಅತ್ಯಂತ ವ್ಯವಸ್ಥಿತವಾಗಿ ಯಾಮಾರಿಸುವ ಪರಿಪಾಠವೂ ನಡೆದುಕೊಂಡು ಬಂದಿದೆ. ಮೊದಲೇ ಹೇಳಿದಂತೆ ಈ ಮಾಡೆಲಿಂಗ್ ಕ್ಷೇತ್ರವನ್ನು ಬಟ್ಟೆ ಬ್ರಾಂಡುಗಳು ಮ್ಯಾನೇಜು ಮಾಡುತ್ತವೆ. ಇಂಥಾ ಕಂಪೆನಿಗಳು ತ್ಯಾಜ್ಯದ ಮೂಲಕ ಪರಿಸರವನ್ನು ಸರ್ವನಾಶ ಮಾಡುತ್ತಿವೆ. ಅದನ್ನು ಮುಚ್ಚಿಟ್ಟುಕೊಂಡು, ಕೆಲ ಬಾರಿ ಪರಿಸರ ಸ್ನೇಹಿ ಪ್ರಾಡಕ್ಟುಗಳ ಮೂಲಕ ಸದ್ದು ಮಾಡೋದೂ ಇದೆ. ಉದಾಹರಣೆಗೆ ಕೆಲವೊಂದು ಬಟ್ಟೆ ಐಟಮ್ಮುಗಳು ಸಾಗರದ ತ್ಯಾಜ್ಯದಿಂದ ತಯಾರಿಸಿದಂಥವು ಎಂಬಂತೆ ಬಿಂಬಿಸಲಾಗುತ್ತೆ. ಜನ ಪರಿಸರ ಕಾಳಜಿಯ ಆವೇಗದಲ್ಲಿ ಹಿಂದೆ ಮುಂದೆ ಯೋಚಿಸದೆ ಅಂಥವನ್ನು ದುಬಾರಿ ಬೆಲೆಗೆ ಮುಗಿಬಿದ್ದು ಖರೀದಿಸುತ್ತಾರೆ. ಈ ಮೂಲಕ ಪರಿಸರ ಸಂರಕ್ಷಣೆಗೆ ಅಳಿಲು ಸೇವೆ ಸಲ್ಲಿಸಿದ ಆತ್ಮ ತೃಪ್ತಿಯಿಂದ ಬೀಗುತ್ತಾರೆ. ಹಾಗಾದ್ರೆ, ಅವುಗಳು ನಿಜಕ್ಕೂ ತ್ಯಾಜ್ಯದಿಂದ ತಯಾರಿಸಿದವಾ ಅಂತ ನೋಡ ಹೋದರೆ ಅದರಲ್ಲಿ ನಿಖರವಾಗಿಯೇ ದೋಖಾಬಾಜಿ ಕಣ್ಣಿಗೆ ರಾಚುತ್ತೆ!
ಇದು ದೋಖಾ ಸತ್ಯ!
ಈಗಾಗಲೇ ನಡೆದಿರೋ ಸಂಶೋಧನೆಗಳು ಕಲೆ ಹಾಕಿರುವ ಸೂಕ್ಷ್ಮ ವಿಚಾರಗಳು ಬಟ್ಟೆ ಕಂಪೆನಿ ಮತ್ತು ಫ್ಯಾಶನ್ ಜಗತ್ತಿನ ನಗ್ನ ಸತ್ಯಗಳನ್ನು ಜಾಹೀರು ಮಾಡುವಂತಿವೆ. ಈ ಜಗತ್ತಿನ ಶೇಖಡಾ ಎಂಬತ್ಮಾರರಷ್ಟು ನೀರು ಕಲುಷಿತಗೊಂಡಿರೋದು ಬಟ್ಟೆಗಳ ಕಾರಣದಿಂದಲೇ. ಜೈವಿಕವಾಗಿ ವಿಘಟನೆಯಾಗಲಾರದ ಬಟ್ಟೆಗಳಿಂದ ಸೂಕ್ಷ್ಮ ಫೈಬರ್ ಕಂಟೆಂಟು ಬಟ್ಟೆ ಒಗೆಯುವ ರೂಪದಲ್ಲಿ ನೀರುಪಾಲಾಗುತ್ತೆ. ಇಂಥಾ ನೀರು ಸಮರೋಪಾದಿಯಲ್ಲಿ ಸಾಗರ ಸೇರಿ ನೀರಿನ ಸೆಲೆಯೇ ಕಲುಷಿತಗೊಂಡಿದೆ. ಇನ್ನು ಬಟ್ಟೆಗಳಿಂದಲೇ ಅರ್ಧ ಮಿಲಿಯನ್ ಮೈಕ್ರೋ ಫೈಬರ್ ಅಂಶ ನೀರಿಗೆ ಸೇರುತ್ತದೆ. ಇದು ಐವತ್ತು ಶತಕೋಟಿ ಪ್ಲಾಸ್ಟಿಕ್ ಬಾಟಲಿಗಳಿಗೆ ಸಮನಾಗಿರುತ್ತೆ. ಹಾಗಿರುವಾಗ ಈ ಬಟ್ಟೆ ಕಂಪೆನಿಗಳ ಮರುಬಳಕೆ ಎಂಬ ಸ್ಲೋಗನ್ನು ಬೂಟಾಟಿಕೆ ಅನ್ನೋದರಲ್ಲಿ ಎರಡು ಮಾತಿಲ್ಲ. ಸಾಗರದ ಪ್ಲಾಸ್ಟಿಕ್ ಮರುಬಳಕೆ ಮಾಡಿ ಬಟ್ಟೆ ತಯಾರಿಸಿದ ಪೋಸನ್ನು ಈ ಕಂಪೆನಿಗಳು ಕೊಡುತ್ತವೆ. ಮತ್ತೆ ಬಟ್ಟೆಗಳ ಮೂಲಕವೇ ಅಷ್ಟೇ ಪ್ರಮಾಣದಲ್ಲಿ ನೀರು ವಿಷವಾಗುತ್ತಿದೆ!
ಫ್ಯಾಶನ್ ಜಗತ್ತಿನ ಗುಲಾಮಗಿರಿ
ನಿಮಗೆ ಅಚ್ಚಿರಿಯಾಗಬಹುದೇನೋ… ಈ ಫ್ಯಾಶನ್ ಲೋಕ ಅನ್ನೋದು ಸಾಗರದಷ್ಟೇ ಆಳ ಅಗಲವಿರುವ ದೈತ್ಯ ಲೋಕ. ಅದನ್ನು ಎತ್ತಲಿಂದ ಅಂದಾಜಿಸಿದರೂ ಕೂಡಾ ಅರಗಿಸಿಕೊಳ್ಳಲು ಕಷ್ಟವಾಗುವಂಥಾ ಅಂಶಗಳೇ ಕಣ್ಣಿಗೆ ರಾಚುತ್ತವೆ. ಇದು ಕೋಟಿ ಕೋಟಿ ಕಿಮ್ಮತ್ತಿನ ವ್ಯವಹಾರ ಅಂದಮೇಲೆ ಬಟ್ಟೆ ತಯಾರಿಕೆಯ ಹಂತದಿಂದಲೇ ಭಾರೀ ಹೂಡಿಕೆ ಬೇಕಾಗುತ್ತೆ. ಈವತ್ತಿಗೆ ಅದೆಷ್ಟೇ ಯಾಂತ್ರೀಕರಣ ಆಗಿದ್ದರೂ ಕೂಡಾ ಮಾನವ ಶ್ರಮವೇ ಅಲ್ಲಿ ನಿರ್ಣಾಯಕ. ಇಲ್ಲಿ ಕೂಡಾ ಲಾಭ ಗಳಿಸುವ ಉದ್ದೇಶದಿಂದ ಉದ್ಯಮಿಗಳು ಬಡತನ, ಅನಿವಾರ್ಯತೆಯಿರುವ ಜನರತನ್ನು ಅಕ್ಷರಶಃ ಗುಲಾಮರಂತೆ ಬಳಸಿಕೊಳ್ಳುತ್ತಿದ್ದಾರೆ.
ಚೀನಾದಂಥಾ ದೇಶಗಳು ಅಗ್ಗದ ದರದಲ್ಲಿ ಬಟ್ಟೆ ಸೇರಿದಂತೆ ಅನೇಕ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಈ ಮೂಲಕ ಒಂದಷ್ಟು ಮಂದಿಗೆ ಉದ್ಯೋಗ ಸಿಗುತ್ತದೆ ಅಂತನ್ನಿಸೋದು ಸಹಜ. ಆದರೆ, ಅದರಾಳದಲ್ಲಿ ಗುಲಾಮಗಿರಿಯ ಕಿಸುರಿದೆ. ಯಾಕಂದ್ರೆ ಈ ಚೀನೀಯರು ಪ್ರತಿಯೊಂದರಲ್ಲಿಯೂ ಲಾಭ ಪಡೆಯೋ ಕಿರಾತಕರು. ಇಂಥಾ ಬಟ್ಟೆ ಉದ್ಯಮಗಳಿಗೆ ಅವರು ಬಡ ದೇಶಗಳಿಂದ ಜನರನ್ನು ಕೂಡಿ ತರುತ್ತಾರೆ. ತನ್ನದೇ ದೇಶದ ಬಡವರನ್ನೂ ಒತ್ತೆಯಾಳುಗಳಂತೆ ಇಟ್ಟುಕೊಂಡು ಕೆಲಸ ಮಾಡಿಸುತ್ತಾರೆ. ಈ ಫ್ಯಾಶನ್ ಜಗತ್ತಿನಲ್ಲಿ ಮಾಲಿನ್ಯ, ಕಾಮ, ಕಸಗಳಂತೆಯೇ ಗುಲಾಮಗಿರಿಯೂ ಇದೆ.
ಈ ಜಗತ್ತಿನಲ್ಲಿ ಜವಳಿ ತ್ಯಾಜ್ಯ ಪರಿಸರ ಮಾಲೀನ್ಯಕ್ಕೆ ಪ್ರಧಾನ ಕಾರಣವಾಗಿದೆ ಅಂತ ಅನೇಕ ಸಮೀಕ್ಷೆಗಳು ಸಾರಿ ಹೇಳುತ್ತಿವೆ. ಅವುಗಳನ್ನು ವಿಲೇವಾರಿ ಮಾಡಲು ಆಯಾ ದೇಶಗಳಲ್ಲಿ ಒಂದಷ್ಟು ರೂಪರೇಷೆಗಳಿದ್ದಾವೆ. ಆದರೆ ಗಾರ್ಮೆಂಟ್ಸ್ ಘಟ್ಟದಿಂದಲೇ ಅದನ್ನು ಮೀರಿಕೊಂಡು ಪರಿಸರವನ್ನು ಕಲುಷಿತಗೊಳಿಸುವ ಹುನ್ನಾರಗಳು ಎಗ್ಗಿಲ್ಲದೆ ನಡೆಯುತ್ತಾ ಬಂದಿವೆ. ಇದು ಜಗತ್ತಿನ ಅಷ್ಟೂ ದೇಶಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಕೇವಲ ಬಟ್ಟೆಯ ತ್ಯಾಜ್ಯ ಮಾತ್ರವಲ್ಲ, ಈ ಉದ್ಯಮದಲ್ಲಿ ಅತ್ಯಂತ ಕಾರ್ಕೋಟಕ ವಿಷವನ್ನು ಕೂಡಾ ನೇರವಾಗಿ ಆಯಾ ಪ್ರದೇಶಗಳ ನದಿ ಮೂಲಗಳನ್ನು ಸೇರಿಸಲಾಗುತ್ತಿದೆ. ಬಟ್ಟೆಗೆ ಬಣ್ಣ ಹಾಕಲು ನಾನಾ ಕೆಮಿಕಲ್ ಗಳನ್ನು ಬಳಸಲಾಗುತ್ತೆ. ಅದಕ್ಕೆ ಹೊಳಪು ಬರಲು, ಬ್ರಾಂಡೆಡ್ ಅಂತೆಲ್ಲ ಭ್ರಮೆ ಬಿತ್ತಲು ಬೇಕಾದ ಫಾರ್ಮುಲಾ ಇರೋದು ಕೆಮಿಕಲ್ ಬಳಕೆಯಲ್ಲಿಯೇ. ಅಂಥಾ ಅದೆಷ್ಟೋ ವಿಷ ಪ್ರತೀ ಕ್ಷಣವೂ ನದಿ ಮೂಲ ಹಾಗೂ ಅಂತರ್ಜಲ ಮೂಲ ಸೇರಿಕೊಳ್ಳುತ್ತಿದೆ.
ನೌಟಂಕಿ ಆಟ!
ಹೀಗೆ ಹಂತ ಹಂತವಾಗಿ ಪರಿಸರವನ್ನು ನಾಶ ಪಡಿಸುತ್ತಿರುವ ಬಟ್ಟೆ ಉದ್ಯಮ ಫ್ಯಾಶನ್ ಜಗತ್ತಿನ ಸೆಳೆತದಿಂದ ನಾನಾ ನಾಟಕಗಳನ್ನಾಡುತ್ತಿದೆ. ಹಿತ್ತಿಲ ಬಾಗಿಲಿಂದ ಪರಿಸರ ಹಾಳು ಮಾಡಿ ಮುಂಬಾಗಿಲಲ್ಲಿ ಪರಿಸರ ಸ್ನೇಹಿ ಬಟ್ಟೆ ಅನ್ನೋ ಮಂತ್ರಘೋಷ ಮೊಳಗಿಸುವ ದಂಧೆಯೂ ನಡೆಯುತ್ತಿದೆ. ಆಗಾಗ ನಾನಾ ಇಕೋ ಫ್ರೆಂಡ್ಲಿ ಬಟ್ಟೆಗಳು ಸದ್ದು ಮಾಡುತ್ತವೆ. ಜನ ಭ್ರಮೆಗೆ ವಶವಾದವರಂತೆ ಅದನ್ನು ಖರೀದಿಸಿ ತಾವು ಪರಿಸರ ಪ್ರೇಮಿಗಳೆಂಬಂತೆ ಖುಷಿಗೊಳ್ಳುತ್ತಾರೆ. ಆ ಬಟ್ಟೆಗಳೆಲ್ಲವೂ ಶುದ್ಧ ಸಾವಯವ ಹತ್ತಿಯಿಂದ ತಯಾರಾಗಿದೆ ಅಂತ ಜನ ನಂಬುತ್ತಾರೆ. ಆದರೆ, ಇಂಥಾ ಬಟ್ಟೆಗಳೂ ಕೂಡಾ ಕೆಮಿಕಲ್ ಬಳಸಿ, ಅತ್ಯಂತ ಬೇಜವಾಬ್ದಾರಿಯಿಂದಲೇ ತಯಯಾರಾಗಿರುತ್ತವೆಂಬುದು ನಗ್ನ ಸತ್ಯ.
ಒಟ್ಟಾರೆಯಾಗಿ ಈ ಫ್ಯಾಶನ್ ಜಗತ್ತಿನಿಂದಲೇ ಇಡೀ ವಿಶ್ವದ ಬಹುಪಾಲು ಭೂಮಿ ವಿಷಗೊಳ್ಳುತ್ತಿದೆ. ನದಿ ಮೂಲಗಳಿಗೆ ನಮಗೇ ಗೊತ್ತಿಲ್ಲದಂತೆ ವಿಷ ಸೇರಿಕೊಳ್ಳುತ್ತಿದೆ. ನಮ್ಮ ಬೆವರಿನ ಕಾಸಿಂದ ಖರೀದಿಸಿ ತರುವ ಬಟ್ಟೆಗಳು, ಫ್ಯಾಷನ್ ಮೋಹದಿಂದ ನಡೆಯೋ ನಮ್ಮ ಖರೀದಿಯೆಲ್ಲವೂ ನದಿ ಮೂಲಗಳನ್ನು ನಾಶ ಮಾಡುತ್ತಿವೆ. ನಿಮ್ಮ ಮುಂದೆ ಮಾದಕಲವಾಗಿ ಬಳುಕೋ ಮಾಡಲ್ಲುಗಳ ಮೈ ಮೇಲಿರೋದು ನಮ್ಮ ಭವಷ್ಯದ ಕರಾಳತೆಯನ್ನ ಸಾರೋ ರಂಗು ರಂಗಿನ ಬಟ್ಟೆ ಅನ್ನೋದು ಎಲ್ಲರಿಗೂ ಅರಿವಾಗಬೇಕಿದೆ. ಅದರೊಳಗಿನ ಎಲ್ಲ ದಂಧೆಗಳಿಗೂ ಕಡಿವಾಣ ಬಿದ್ದು, ವಿನಾಕಾರಣ ಉತ್ಪಾದನೆಯಾಗೋ ಬಟ್ಟೆಗಳಿಗೆ ಕಡಿವಾಣ ಹಾಕಬೇಕಿದೆ. ಸದ್ಯದ ಮಟ್ಟಿಗೆ ಫ್ಯಾಶನ್ ಜಗತ್ಚತನ್ನು ಕಾಮ, ಕಮಾಯಿ, ಕಸ, ಗುಲಾಮಗಿರಿಯಂಥಾ ವಿಚಾರಗಳು ಆವರಿಸಿಕೊಂಡಿವೆ!