ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ, ‘ಫೈಟರ್’ ಸಿನಿಮಾದ ಲವ್ ಸಾಂಗ್ ಇತ್ತೀಚೆಗೆ ಹೊರಬಂದಿದೆ. ನಟಿ ಅನುಷ್ಕಾ ಶೆಟ್ಟಿ ಸಹೋದರ ಗುರುರಂಜನ್ ಶೆಟ್ಟಿ, ನಾಗರಾಜ್, ಕೃಷ್ಣಪ್ಪ, ಗೌರೀಶ್ ಹಾಗೂ ಹಿರಿಯ ಪತ್ರಕರ್ತರಾದ ಕೆ. ಎಸ್ ವಾಸು, ಕೆ. ಎನ್. ನಾಗೇಶ್ ಕುಮಾರ್ ಮುಂತಾದ ಗಣ್ಯರು ‘ಐ ವಾನ ಫಾಲೋ ಯು’ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

‘ಫೈಟರ್’ ಚಿತ್ರಕ್ಕಾಗಿ ಚಿತ್ರಸಾಹಿತಿ ಕವಿರಾಜ್ ಬರೆದಿರುವ ‘ಐ ವಾನ ಫಾಲೋ ಯು’ ಎಂಬ ಈ ಹಾಡಿಗೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದು ಚೈತ್ರಾ ಹೆಚ್. ಜಿ ಈ ಹಾಡಿಗೆ ಧ್ವನಿಯಾಗಿದ್ದಾರೆ. ನೂತನ್ ಉಮೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಫೈಟರ್’ ಸಿನಿಮಾವನ್ನು ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಿಸಿದ್ದಾರೆ.
‘ಐ ವಾನ ಫಾಲೋ ಯು’ ಎಂಬ ಈ ಹಾಡನ್ನು ಪಾಂಡಿಚೇರಿಯ ಸುಂದರ ಪರಿಸರದಲ್ಲಿ ಚಿತ್ರಿಸಲಾಗಿದೆ. ಈ ಹಾಡಿನಲ್ಲಿ ನಾಯಕ ನಟ ವಿನೋದ್ ಪ್ರಭಾಕರ್, ನಾಯಕಿ ಲೇಖಾ ಚಂದ್ರ ಜೋಡಿಯಾಗಿ ಅಭಿನಯಿಸಿದ್ದು, ಮೋಹನ್ ನೃತ್ಯ ಸಂಯೋಜಿಸಿದ್ದಾರೆ. ಈಗಾಗಲೇ ‘ಫೈಟರ್’ ಸಿನಿಮಾದ ಫಸ್ಟ್ ಲುಕ್, ಟೀಸರ್ ಮತ್ತು ಬ್ಯಾಕ್ ಟು ಬ್ಯಾಕ್ ಹಾಡುಗಳು ಬಿಡುಗಡೆಯಾಗುತ್ತಿದ್ದು, ಶೀಘ್ರದಲ್ಲಿಯೇ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಚಿತ್ರತಂಡದ ಪ್ಲಾನ್ ಪ್ರಕಾರ ಇದೇ ಅಕ್ಟೊಬರ್ ವೇಳೆಗೆ ‘ಫೈಟರ್’ ತೆರೆಗೆ ಬರುವ ಯೋಚನೆಯಲ್ಲಿದೆ.





