ಬಾಲಿವುಡ್ ನಲ್ಲಿ ಕಳೆದ ಐದು ವರ್ಷಗಳಿಂದ ತನ್ನ ಸಿನಿಮಾ ಸೋಲುಗಳಿಂದ ಕಂಗೆಟ್ಟಿದ್ದ ನಟ ಶಾರುಖ್ ಖಾನ್ ಈ ವರ್ಷದ ಆರಂಭದಲ್ಲಿಯೇ ‘ಪಠಾಣ್’ ಸಿನಿಮಾದ ಮೂಲಕ ಭರ್ಜರಿಯಾಗಿ ರೀ-ಎಂಟ್ರಿ ಕೊಟ್ಟಿದ್ದರು. ‘ಪಠಾಣ್’ ಸಿನಿಮಾದ ಬಳಿಕ ಈ ವರ್ಷದ ಮಧ್ಯ ಭಾಗದಲ್ಲಿ ʼಜವಾನ್ʼ ಸಿನಿಮಾ ಮೂಲಕ ಮತ್ತೊಮ್ಮೆ ಬಾಕ್ಸ್ ಆಫೀಸ್ ಕಿಂಗ್ ಆಗಿ ಗೆಲುವಿನ ನಗೆ ಬೀರಿದ್ದರು. ಇದೀಗ ಶಾರೂಖ್ ಖಾನ್ ಈ ವರ್ಷದ ಅಂತ್ಯದೊಳಗೇ ತಮ್ಮ ಮೂರನೇ ಸಿನಿಮಾ ‘ಡಂಕಿ’ಯನ್ನು ತೆರೆಗೆ ತಂದು ಸೂಪರ್ ಹಿಟ್ ಮಾಡಿ ಹ್ಯಾಟ್ರಿಕ್ ಸಿನಿಮಾ ಸಕ್ಸಸ್ ಗರಿಯನ್ನು ಮುಡಿಗೇರಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.
ಹೌದು, ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಬಿಗ್ ಹಿಟ್ ಗಳನ್ನು ನೀಡಿದ ಬಳಿಕ ಇದೀಗ ಶಾರುಖ್ ಖಾನ್ ತಮ್ಮ ಮುಂದಿನ ಚಿತ್ರದತ್ತ ಗಮನ ಹರಿಸಿದ್ದಾರೆ. ಶಾರುಖ್ ಖಾನ್ ನಿರ್ದೇಶಕ ರಾಜ್ಕುಮಾರ್ ಹಿರಾನಿ ಅವರ ʼಡಂಕಿʼ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ ವರ್ಷದ ಕೊನೆಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿತ್ತು.
ಇದೀಗ ಸಿನಿಮಾದ ರಿಲೀಸ್ ಡೇಟ್ ನ್ನು ಸ್ವತಃ ಶಾರುಖ್ ಖಾನ್ ಆಧಿಕೃತಗೊಳಿಸಿದ್ದಾರೆ. ಡಿಸೆಂಬರ್ 22 ರಂದು ಸಿನಿಮಾ ರಿಲೀಸ್ ಆಗಲಿದೆ ಎನ್ನುವುದನ್ನು ಶಾರುಖ್ ಖಾನ್ ಅಧಿಕೃತಗೊಳಿಸಿದ್ದಾರೆ. ಇತ್ತೀಚೆಗೆ ನಡೆದ ‘ಜವಾನ್’ ಸಕ್ಸಸ್ ಮೀಟ್ ನಲ್ಲಿ ಮಾತನಾಡಿದ ಶಾರೂಖ್ ಖಾನ್, ‘ಈ ಹಿಂದೆ ನಾವು ಗಣರಾಜ್ಯ ದಿನ (ಜ. 26) ದಂದು ‘ಪಠಾಣ್’ ಸಿನಿಮಾ ರಿಲೀಸ್ ಮಾಡಿದ್ದೇವೆ. ಆ ಬಳಿಕ ಶ್ರೀಕೃಷ್ಣನ ಜನ್ಮಾಷ್ಟಮಿಯಂದು ʼಜವಾನ್ʼ ಸಿನಿಮಾವನ್ನು ಬಿಡುಗಡೆ ಮಾಡಿದ್ದೇವೆ. ಮುಂದೆ ಕ್ರಿಸ್ಮಸ್ ಹಬ್ಬಕ್ಕೆ ‘ಡಂಕಿ’ ಸಿನಿಮಾವನ್ನು ತರಲಿದ್ದೇವೆ’ ಎಂದಿದ್ದಾರೆ.





