ಈ ಹಿಂದೆ ‘ಸಂಕಷ್ಟಕರ ಗಣಪತಿ’ ಮತ್ತು ‘ಪಿ ಆರ್ ಕೆ ಪ್ರೊಡಕ್ಷನ್ಸ್’ನ ‘ಫ್ಯಾಮಿಲಿ ಪ್ಯಾಕ್’ ಸಿನಿಮಾಗಳಲ್ಲಿ ನಟಿಸಿದ್ದ ನಾಯಕ ನಟ ಲಿಖಿತ್ ಶೆಟ್ಟಿ, ಈಗ ‘ಫುಲ್ ಮೀಲ್ಸ್’ ಸಿನಿಮಾವನ್ನು ನಿರ್ಮಿಸುತ್ತಿದ್ದು ಜೊತೆಗೆ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ‘ಫುಲ್ ಮೀಲ್ಸ್’ ಸಿನಿಮಾದಲ್ಲಿ ಲಿಖಿತ್ ಶೆಟ್ಟಿ ಅವರಿಗೆ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ‘ಫುಲ್ ಮೀಲ್ಸ್’ ಸಿನಿಮಾದ ಅಂತಿಮ ಹಂತದ ಶೂಟಿಂಗ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ವೇಳೆ ಸಿನಿಮಾದ ನಾಯಕಿಯರಲ್ಲಿ ಒಬ್ಬರಾದ ತೇಜಸ್ವಿನಿ ಶರ್ಮ ಹುಟ್ಟುಹಬ್ಬವನ್ನೂ ಜೋರಾಗಿ ಆಚರಿಸಿಕೊಂಡಿದ್ದಾರೆ.
ಇನ್ನು ‘ಫುಲ್ ಮೀಲ್ಸ್’ ನಾಯಕಿ ತೇಜಸ್ವಿನಿ ಶರ್ಮ ಹುಟ್ಟುಹಬ್ಬದ ಸಲುವಾಗಿ ಚಿತ್ರತಂಡ ಅವರಿಗೆ ಸ್ಪೆಷಲ್ ಗಿಫ್ಟ್ ನೀಡಿದೆ. ಅದೇನೆಂದರೆ, ‘ಫುಲ್ ಮೀಲ್ಸ್’ ಸಿನಿಮಾದ ಪ್ರೊಮೋಶನಲ್ ವೀಡಿಯೋ ಮತ್ತು ಬರ್ತ್ ಡೇ ಫೋಸ್ಟರ್. ಹೌದು, ‘ಫುಲ್ ಮೀಲ್ಸ್’ ಸಿನಿಮಾದಲ್ಲಿ ನಾಯಕಿ ತೇಜಸ್ವಿನಿ ಶರ್ಮ ಮೇಕಪ್ ಆರ್ಟಿಸ್ಟ್ ಪಾತ್ರವನ್ನು ಮಾಡಿದ್ದಾರೆ. ಹೀಗಾಗಿ ಮೇಕಪ್ ಆರ್ಟಿಸ್ಟ್ ಗಳ ಬವಣೆಯನ್ನು ತೋರಿಸುವ ವಿಡಂಬನೆ ಮತ್ತು ಮನೋರಂಜನೆ ಯಿಂದ ಕೂಡಿದ ವೀಡಿಯೋ ಒಂದನ್ನು ಚಿತ್ರತಂಡ ತೇಜಸ್ವಿನಿ ಅವರಿಗೆ ಸ್ಪೆಷಲ್ ಗಿಫ್ಟ್ ಆಗಿ ಬಿಡುಗಡೆ ಮಾಡಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದು, ನೋಡುಗರಿಂದ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಎನ್. ವಿನಾಯಕ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಫುಲ್ ಮೀಲ್ಸ್’ ಚಿತ್ರವು, ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ನಡೆಯುವ ಕಥಾ ಹಂದರವನ್ನು ಹೊಂದಿದೆ.





