ದೊಡ್ಮನೆ ಅಭಿಮಾನಿಗಳಿಗೆ ಹೊಂಬಾಳೆ ಫಿಲಂಸ್ ನಿರಾಸೆ ಮಾಡುತ್ತಾ? `ಯುವ’ಗಾಗಿ ರಿಸರ್ವ್ ಆಗಿದ್ದ ರಿಲೀಸ್ ಡೇಟ್ನ `ಸಲಾರ್’ ಗಾಗಿ ಬಳಸಿಕೊಳ್ಳುತ್ತಾ? ಯುವರಾಜ್ಕುಮಾರ್ ನಟನೆಯ ಬಹುನಿರೀಕ್ಷಿತ `ಯುವ’ ಚಿತ್ರವನ್ನ ಹೊಂಬಾಳೆ ಮುಂದೂಡುತ್ತಾ? ಯುವ ಬರಬೇಕಿದ್ದ ದಿನ ಸಲಾರ್ ಆಗಮನವಾಗುತ್ತಾ? ಇಷ್ಟು ಪ್ರಶ್ನೆಗಳು ಏಕಾಏಕಿ ಹುಟ್ಟಿಕೊಳ್ಳುವುದಕ್ಕೆ ಕಾರಣ ಗೂಗಲ್ ಕೊಡ್ತಿರುವ ಅಪ್ಡೇಟ್ ಹಾಗೂ ಟ್ರೇಡ್ ಅನಲಿಸ್ಟ್ ಮನೋಬಾಲ ವಿಜಯ್ ಬಾಲನ್ ಟ್ವೀಟ್
ಏನದು ಅಪ್ಡೇಟ್ ಅಂಡ್ ಟ್ವೀಟ್ ಅಂತೀರಾ? ಸಲಾರ್ ರಿಲೀಸ್ ಡೇಟ್ ಫಿಕ್ಸಾಗಿದೆ. ಡಿಸೆಂಬರ್ 22ರಂದು ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ `ಸಲಾರ್- ಸೀಜ್ ಫೈರ್’ ವಲ್ರ್ಡ್ ವೈಡ್ ತೆರೆಕಾಣಲಿದೆ ಎಂಬ ಮಾಹಿತಿ ಬಿಗ್ ಬ್ರೇಕಿಂಗ್ ನ್ಯೂಸ್ ಆಗಿದೆ. ಈ ಬಗ್ಗೆ ಸಲಾರ್ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ ಕಡೆಯಿಂದ ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ, ತಮಿಳಿನ ಟ್ರೇಡ್ ಅನಲಿಸ್ಟ್ ಮನೋಬಾಲ ವಿಜಯ್ ಬಾಲನ್ ಡಿಸೆಂಬರ್ 22ರಂದು `ಸಲಾರ್’ ಬಿಡುಗಡೆಯಾಗೋದು ಪಕ್ಕಾ ಅಂತ ಟ್ವೀಟ್ ಮಾಡಿದ್ದಾರೆ.

ಅಚ್ಚರಿ ಅಂದರೆ `ಸಲಾರ್’ ರಿಲೀಸ್ ಡೇಟ್ ಪೋಸ್ಟ್ ಪೋನ್ ಬಗ್ಗೆ ಮನೋಬಾಲ ಅವರೇ ಫಸ್ಟ್ ಟ್ವೀಟ್ ಮಾಡಿದ್ದರು. ಸೆಪ್ಟೆಂಬರ್ 28ರಂದು ಸಲಾರ್ ರಿಲೀಸ್ ಆಗ್ತಿಲ್ಲ ಅಂತ ನಿರ್ಮಾಣ ಸಂಸ್ಥೆ ಮೊದಲೇ ಸಿನಿಮಾ ಪ್ರೇಮಿಗಳಿಗೆ ತಿಳಿಸಿದ್ದರು. ಇದಾಗಿ, ಐದಾರು ದಿನಗಳು ಕಳೆದ್ಮೇಲೆ ಹೊಂಬಾಳೆ ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿತ್ತು. ಪೋಸ್ಟ್ ಪ್ರೊಡಕ್ಷನ್ ಸೇರಿದಂತೆ ಇತರೆ ಕೆಲಸಗಳು ಸರಿಯಾದ ಟೈಮ್ಗೆ ಮುಗಿಯದೇ ಇರುವುದರಿಂದ `ಸಲಾರ್’ ಮುಂದೂಡಲಾಗ್ತಿರುವುದಾಗಿ ಹೇಳಿಕೊಂಡಿತ್ತು. ಶೀಘ್ರದಲ್ಲೇ ಹೊಸ ಡೇಟ್ನ ಅಪ್ಡೇಟ್ ಮಾಡುವುದಾಗಿ ತಿಳಿಸಿದ್ದು, ಅವರು ಅಪ್ಡೇಟ್ ಕೊಡುವ ಮುನ್ನವೇ ಮನೋಬಾಲ ಬ್ಲಾಕ್ ಬಸ್ಟರ್ ಸುದ್ದಿ ಕೊಟ್ಟಿದ್ದಾರೆ. ಡಿಸೆಂಬರ್ 22ರಂದು ಸಲಾರ್ ವರ್ಸಸ್ ಡಂಕಿ ನಡುವೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಪಕ್ಕಾ ಅನ್ನೋದನ್ನ ತಿಳಿಸಿದ್ದಾರೆ.

ಸಲಾರ್ ವರ್ಸಸ್ ಡಂಕಿ ವಾರ್ ಸುದ್ದಿ ಕೇಳಿ ರೆಬೆಲ್ ಸ್ಟಾರ್ ಪ್ರಭಾಸ್ ಅಭಿಮಾನಿಗಳೇನೋ ಕೇಕೆ ಹೊಡೆಯುತ್ತಿದ್ದಾರೆ. ಆದರೆ, ಯುವರಾಜ್ಕುಮಾರ್ ಅಭಿಮಾನಿಗಳು ಫುಲ್ ಅಪ್ಸೆಟ್ ಆಗಿದ್ದಾರೆ. ಹೌದು, ಡಿಸೆಂಬರ್ 22ರಂದು ಪವರ್ ಪ್ರಿನ್ಸ್ ಆಗಮನವಾಗುತ್ತೆ. ಬೆಳ್ಳಿಪರದೆ ಮೇಲೆ ಯುವ ಪರ್ವ ಶುರುವಾಗುತ್ತೆ ಅಂತ ಕಾತುರರಾಗಿದ್ದರು. ಅಪ್ಪು ಉತ್ತರಾಧಿಕಾರಿನಾ ಬೆಳ್ಳಿಭೂಮಿಗೆ ಅದ್ದೂರಿಯಾಗಿ ಬರಮಾಡಿಕೊಳ್ಳಲು ಸಕಲ ತಯ್ಯಾರಿಗಳನ್ನು ಮಾಡಿಕೊಳ್ಳುತ್ತಿದ್ದರು. ಆದ್ರೀಗ, `ಯುವ’ ಬರಬೇಕಿದ್ದ ದಿನ `ಸಲಾರ್’ ಆಗಮನವಾಗ್ತಿದೆ ಎಂಬ ಸುದ್ದಿ ಕೇಳಿ ಬೇಜಾರ್ ಮಾಡಿಕೊಂಡಿದ್ದಾರೆ. `ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ.. ಇರಲಿ ನಿಮ್ಮ ಅಪ್ಪುಗೆ’ ಅಂತೇಳಿದ ಹೊಂಬಾಳೆ ಸಂಸ್ಥೆ, ದೊಡ್ಮನೆಯ ಪುಟ್ಟ ರಾಜಕುಮಾರನ ಮೊದಲ ಸಿನಿಮಾಗೆ ಈ ರೀತಿ ಅಡ್ಡಿಯಾಗಬಾರದಿತ್ತು ಅಂತ ಮಾತನಾಡಿಕೊಳ್ತಿದ್ದಾರೆ.

ಸಿನಿಮಾ ರಿಲೀಸ್ ವಿಚಾರದಲ್ಲಿ ನಿರ್ಮಾಪಕರು ಸ್ವತಂತ್ರರಾಗಿರುತ್ತಾರೆ. ಕೋಟಿ ಕೋಟಿ ಬಂಡವಾಳ ಹೂಡುವ ಅನ್ನದಾತರು ಅವರಾಗಿರುವುದರಿಂದ ಅವರು ನಿಗದಿಪಡಿಸಿದ ದಿನದಂದೇ ಸಿನಿಮಾ ರಿಲೀಸ್ ಮಾಡುವುದು ವಾಡಿಕೆ. ಹೀಗಾಗಿ, ಡೇಟ್ ವಿಚಾರದಲ್ಲಿ ಯುವ ಎಂಟ್ರಿಕೊಡಲು ಸಾಧ್ಯವಿಲ್ಲ ಅನ್ಸುತ್ತೆ. ಅಷ್ಟಕ್ಕೂ, `ಯುವ’ ಸಿನಿಮಾಗಿಂತ `ಸಲಾರ್’ ಚಿತ್ರಕ್ಕೆ ಹೆಚ್ಚಿನ ಬಂಡವಾಳ ಸುರಿದಿರುವುದರಿಂದ ಹಾಕಿದ ಬಂಡವಾಳದ ಜೊತೆಗೆ ಕೋಟಿ ಕೋಟಿ ಲಾಭ ಮಾಡ್ಲೇಬೇಕಿದೆ. ಅಟ್ ದಿ ಸೇಮ್ ಟೈಮ್ `ಸಲಾರ್’ ಗೆಲ್ಲಲೇಬೇಕಿದೆ. ಹೀಗಾಗಿ, ತಮ್ಮ ನಿರ್ಮಾಣ ಸಂಸ್ಥೆಯ ಲಕ್ಕಿ ಮಂತ್ ಡಿಸೆಂಬರ್ ಮೇಲೆ ಹೊಂಬಾಳೆ ಮಾಲೀಕರು ಕಣ್ಣಿಟ್ಟಿದ್ದಾರೆ. ಡಿಸೆಂಬರ್ 22ರಂದು `ಸಲಾರ್’ ಚಿತ್ರವನ್ನ ವಿಶ್ವದಾದ್ಯಂತ ತೆರೆಗೆ ತರಲು ಸಿದ್ದತೆ ನಡೆಸಿದ್ದಾರೆನ್ನಲಾಗ್ತಿದೆ.

ಒಂದ್ವೇಳೆ ಡಿಸೆಂಬರ್ 22ರಂದು `ಸಲಾರ್’ ಕಣಕ್ಕಿಳಿದಿದ್ದೇ ಆದಲ್ಲಿ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ದಂಗಲ್ ನಡೆಯಲಿದೆ. ಇಂಡಿಯನ್ ಬಾಕ್ಸ್ ಆಫೀಸ್ ಸಲಾರ್ ಹಾಗೂ ಡಂಕಿ ನಡುವಣ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ. 2018ರಲ್ಲಿ ಯಶ್ ಕೆಜಿಎಫ್ ಹಾಗೂ ಶಾರುಖ್ ಜೀರೋ ಸಿನಿಮಾ ನಡುವೆ ಪೈಪೋಟಿ ಎದುರಾಗಿತ್ತು. ನೆಕ್ ಟು ನೆಕ್ ಫೈಟ್ ನಡುವೆ ರಾಕಿಭಾಯ್ ಗೆದ್ದುಬೀಗಿದ್ದರು. ಈಗ ಅಮರೇಂದ್ರ ಬಾಹುಬಲಿ ಹಾಗೂ ಬಾದ್ ಷಾ ನಡುವೆ ಗಲ್ಲಾಪೆಟ್ಟಿಗೆಯಲ್ಲಿ ಕದನ ಶುರುವಾಗಲಿದೆ. ಈ ಬಾಕ್ಸ್ ಆಫೀಸ್ ವಾರ್ನಲ್ಲಿ ಗೆಲ್ಲೋದ್ಯಾರು? ಸೋಲೋದ್ಯಾರು? ಈ ಕುತೂಹಲವೇ ಈಗ ಆಲ್ ಓವರ್ ಇಂಡಿಯಾ ಸಿನಿಮಾ ಪ್ರೇಮಿಗಳನ್ನ ತುದಿಗಾಲಿನಲ್ಲಿ ನಿಲ್ಲಿಸಿದೆ.
ಅಂದ್ಹಾಗೇ, ಇಬ್ಬರು ಸೂಪರ್ ಸ್ಟಾರ್ಸ್, ಇಬ್ಬರ ಸಿನಿಮಾಗಳು ಬಿಗ್ ಬಜೆಟ್ಟಿನಲ್ಲಿಯೇ ತಯ್ಯಾರಾಗಿವೆ. ಬಾಹುಬಲಿ ನಂತರ ಪ್ರಭಾಸ್ ಪ್ಯಾನ್ ಇಂಡಿಯಾ ರೀಚ್ ಆಗಿರೋದ್ರಿಂದ ಅಲ್ಲಿನ ಫ್ಯಾನ್ಸ್ ಕೂಡ ಕಾತುರರಾಗಿದ್ದಾರೆ. ಕೆಜಿಎಫ್ ಕ್ಯಾಪ್ಟನ್ ಸೃಷ್ಟಿಸಿರೋ `ಸಲಾರ್’ ನೋಡಲು ಒಂಟಿಕಾಲಲ್ಲಿ ನಿಂತಿದ್ದಾರೆ. ಅದೇ ರೀತಿ, ಡಂಕಿ ಚಿತ್ರಕ್ಕೂ ಪ್ಯಾನ್ ಇಂಡಿಯಾ ಪ್ರೇಕ್ಷಕರು ಎದುರುನೋಡ್ತಿದ್ದಾರೆ. ಇದೇ ವರ್ಷ ಪಠಾಣ್, ಜವಾನ್ನಂತಹ ಬ್ಲಾಕ್ಬಸ್ಟರ್ ಹಿಟ್ ಕೊಟ್ಟಿರೋ ಬಾದ್ಷಾ `ಡಂಕಿ’ ಚಿತ್ರದಲ್ಲಿ ಮತ್ಯಾವ ಮೋಡಿ ಮಾಡಲಿದ್ದಾರೆಂದು ಕಾಯ್ತಿದ್ದಾರೆ. ಮುನ್ನಭಾಯ್ ಎಂಬಿಬಿಎಸ್, ತ್ರಿಈಡಿಯಟ್ಸ್, ಪಿಕೆ, ಸಂಜು ಖ್ಯಾತಿಯ ನಿರ್ದೇಶಕ ರಾಜ್ಕುಮಾರ್ ಹಿರಾನಿ ಕೈಚಳಕ `ಡಂಕಿ’ ಮೇಲಿನ ನಿರೀಕ್ಷೆಯನ್ನ ಹೆಚ್ಚಿಸಿದೆ. ಈ ಚಿತ್ರ ಕಿಂಗ್ ಖಾನ್ ಕೈ ಹಿಡಿಯುತ್ತಾ? ಪಠಾಣ್, ಜವಾನ್ನಂತೆ ಸೂಪರ್ ಹಿಟ್ಟಾಗಿ ಹ್ಯಾಟ್ರಿಕ್ ಗೆಲುವನ್ನ ತಂದುಕೊಡುತ್ತಾ? ಹೀಗೊಂದು ಕುತೂಹಲದ ಜೊತೆಗೆ `ಸಲಾರ್’ ಸಿನಿಮಾ ಪ್ರಭಾಸ್ನ ಕೈಹಿಡಿಯುತ್ತಾ? ಸೋಲಿನ ಸುಳಿಯಿಂದ ಮೇಲಕ್ಕೆತ್ತಿ ಮೆರೆಸುತ್ತಾ? ಪ್ರಶ್ನೆ ಇದ್ದೇ ಇದೆ.





