ಸಲಾರ್ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದ್ದಕ್ಕೆ ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದರು. ಇದೀಗ, ಅವರೆಲ್ಲರೂ ಖುಷಿಪಟ್ಟು ಕೇಕೆಹೊಡೆಯುವಂತಹ ಸೂಪರ್ ಸಮಾಚಾರವೊಂದು ಹೊರಬಿದ್ದಿದೆ. ಶ್ರೀರಾಮ, ವಿಷ್ಣುವಿನ ನಂತರ ಶಿವಪ್ಪನ ಅವತಾರವೆತ್ತಲಿದ್ದಾರೆನ್ನುವ ಸುಳಿವು ಸಿಕ್ಕಿದೆ. `ಭಕ್ತ ಕಣ್ಣಪ್ಪ’ ಸಿನಿಮಾ ಮತ್ತೊಮ್ಮೆ ರಿಮೇಕ್ ಆಗಲಿದ್ದು, ಕಣ್ಣಪ್ಪನಾಗಿ ವಿಷ್ಣುಮಂಚು, ಶಿವಪ್ಪನಾಗಿ ಪ್ರಭಾಸ್ ಕಾಣಿಸಿಕೊಳ್ತಿದ್ದಾರಂತೆ. ಈ ಮೂಲಕ ಅಮರೇಂದ್ರ ಬಾಹುಬಲಿ ತಮ್ಮ ದೊಡ್ಡಪ್ಪ ಕೃಷ್ಣಂ ರಾಜು ಅವರ ಮಹಾಕನಸನ್ನು ನನಸು ಮಾಡಲು ಹೊರಟಿದ್ದಾರೆನ್ನುವ ಸುದ್ದಿ ಸಂಚಲನ ಸೃಷ್ಟಿಸಿದೆ.

ಡಾರ್ಲಿಂಗ್ ಪ್ರಭಾಸ್ ಸೋಲಿನ ಸುಳಿಗೆ ಸಿಕ್ಕಿ ಒದ್ದಾಡ್ತಿರುವುದು ನಿಮಗೆಲ್ಲ ಗೊತ್ತಿರೋ ವಿಷ್ಯ. ಬಾಹುಬಲಿ ಸಿನಿಮಾದ ನಂತರ ತೆರೆಗೆ ಬಂದ ಸಾಹೋ, ರಾಧ್ಯೆಶ್ಯಾಮ್, ಆದಿಪುರುಷ್ ಸಿನಿಮಾಗಳು ಅಮರೇಂದ್ರ ಬಾಹುಬಲಿನಾ ಕೈಹಿಡಿಯಲಿಲ್ಲ. ಸದ್ಯ, ಸಲಾರ್ ಹಾಗೂ `ಕಲ್ಕಿ 2898 ಎಡಿ’ ಚಿತ್ರಗಳು ನಿರೀಕ್ಷೆ ಹುಟ್ಟಿಸಿವೆ. ಈ ಎರಡು ಸಿನಿಮಾಗಳಿಂದ ಪ್ರಭಾಸ್ ಮತ್ತೆ ಫಾರ್ಮ್‍ಗೆ ಮರಳುವ ಸೂಚನೆಗಳು ಸಿಗ್ತಾಯಿವೆ. ಹೀಗಿರುವಾಗಲೇ `ಕಣ್ಣಪ್ಪ’ ಸಿನಿಮಾದಲ್ಲಿ ಪ್ರಭಾಸ್ ಶಿವಪ್ಪನಾಗ್ತಿರುವ ಸುದ್ದಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಸೌತ್ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ವಿಶ್ವ ಸಿನಿದುನಿಯಾವೇ ಕಣ್ಣರಳಿಸಿ ನೋಡುವಂತೆ ಮಾಡಿದೆ. ಅಂದ್ಹಾಗೇ, ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನ ಅವತಾರವೆತ್ತಿದ್ದರು. ಮುಂದಿನ `ಕಲ್ಕಿ 2898 ಎಡಿ’ ಚಿತ್ರದಲ್ಲಿ ವಿಷ್ಣುವಿನ ಪ್ರತಿರೂಪ ತಾಳಿದ್ದಾರೆ. ಕಲ್ಕಿ ಅವತಾರವು ಭಗವಾನ್ ವಿಷ್ಣುವಿನ ಮೊದಲ ಅವತಾರವಾಗಿದ್ದು ನಿರೀಕ್ಷೆ ಹೆಚ್ಚಿದೆ. ಈ ನಡುವೆ ಕಣ್ಣಪ್ಪ ಚಿತ್ರದ ಶಿವನ ಪಾತ್ರ ಅಭಿಮಾನಿಗಳಲ್ಲಿ ಕುತೂಹಲ ಇಮ್ಮಡಿಯಾಗುವಂತೆ ಮಾಡಿದೆ.

ಕಣ್ಣಪ್ಪ ಚಿತ್ರ `ಭಕ್ತ ಕಣ್ಣಪ್ಪ’ ಸಿನಿಮಾದ ರಿಮೇಕ್. ಆ ಭಕ್ತ ಕಣ್ಣಪ್ಪ ನಮ್ಮ ಅಣ್ಣಾವ್ರ ಬೇಡರ ಕಣ್ಣಪ್ಪ ಚಿತ್ರದ ರಿಮೇಕ್ ಅನ್ನೋದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಈ ಸಿನಿಮಾದಿಂದ ವರನಟ ಡಾ. ರಾಜ್‍ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನಾಯಕನಟರಾಗಿ ಪದಾರ್ಪಣೆ ಮಾಡಿದ್ದರು. ಆ ಸಿನಿಮಾ ಬೆಳ್ಳಿತೆರೆ ಮೇಲೆ ವಿಜೃಂಭಿಸಿ ಬ್ಲಾಕ್‍ಬಸ್ಟರ್ ಹಿಟ್ ಆಗಿತ್ತು. ಅವತ್ತಿಗೆ ಆ ಚಿತ್ರದ ರಿಮೇಕ್ ರೈಟ್ಸ್ ತೆಗೆದುಕೊಂಡು ಹೋಗಿದ್ದ ಪ್ರಭಾಸ್ ಅವರ ತಂದೆ ಉಪ್ಪಲಪಟ್ಟಿ ಸೂರ್ಯನಾರಾಯಣ ರಾಜು ಅವರು, ಸಹೋದರ ಕೃಷ್ಣಂ ರಾಜು ಅವರನ್ನ ನಾಯಕರನ್ನಾಗಿ ಮಾಡಿ `ಭಕ್ತ ಕಣ್ಣಪ್ಪ’ ಸಿನಿಮಾ ಮಾಡಿದ್ದರು. ಈ ಚಿತ್ರ ಅವರಿಗೂ ದೊಡ್ಡ ಹೆಸರು ತಂದುಕೊಟ್ಟಿತ್ತು, ವೃತ್ತಿಬದುಕಿನ ಮಹತ್ವದ ತಿರುವು ಸಿಕ್ಕಿತ್ತು. ಹೀಗಾಗಿ, ಕೃಷ್ಣಂರಾಜು ಅವರು ಮತ್ತೆ ಈ ಸಿನಿಮಾ ರಿಮೇಕ್ ಆಗ್ಬೇಕು, ಅದರಲ್ಲಿ ಪ್ರಭಾಸ್ ಕಣ್ಣಪ್ಪನಾಗಿ ಕಣಕ್ಕಿಳಿಬೇಕು ಅಂತ ಕನಸು ಕಂಡಿದ್ದರು. ಆದರೆ, ಆ ಕನಸು ಈಡೇರುವ ಮೊದಲೇ ಇಹಲೋಕ ತ್ಯಜಿಸಿದರು.

ಇದೀಗ `ಕಣ್ಣಪ್ಪ’ ಚಿತ್ರವನ್ನ ಡ್ರೀಮ್ ಪ್ರಾಜೆಕ್ಟ್ ಎಂದೇ ಭಾವಿಸಿರುವ ನಟ ವಿಷ್ಣುಮಂಚು ಅವರು `ಶಿವಪ್ಪ’ನ ರೋಲ್‍ಗೆ ಪ್ರಭಾಸ್ ಅವ್ರನ್ನ ಸಂಪರ್ಕ ಮಾಡಿದ್ದಾರಂತೆ. ಮಹಾದೇವನ ಪಾತ್ರಕ್ಕೆ ಬಣ್ಣ ಹಚ್ಚಲು ಪ್ರಭಾಸ್ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆನ್ನುವ ಸುದ್ದಿಯಿದೆ. ಇದಕ್ಕೆ ಸಂಬಂಧಪಟ್ಟಂತೆ ಟ್ರೇಡ್ ಅನಲಿಸ್ಟ್ ರಮೇಶ್ ಬಾಲ ಅವ್ರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ರೀಟ್ವೀಟ್ ಮಾಡಿರುವ ವಿಷ್ಣು ಮಂಚು `ಹರ ಹರ ಮಹಾದೇವ್’ ಅಂತ ರಿಯಾಕ್ಟ್ ಮಾಡಿದ್ದಾರೆ. ಅಲ್ಲಿಗೆ, `ಕಣ್ಣಪ್ಪ’ ಸಿನಿಮಾದಲ್ಲಿ ಡಾರ್ಲಿಂಗ್ ಸ್ಪೆಷಲ್ ಅಪಿಯರೆನ್ಸ್ ಮಾಡೋದು ಖರ್ರೆ ಅಂದ್ಹಾಂಗಾಯ್ತು. ಆದ್ರೂ, ಅಧಿಕೃತವಾಗಿ ಘೋಷಣೆ ಮಾಡುವವರೆಗೂ ಕುತೂಹಲದಿಂದ ಕಾದು ನೋಡಬೇಕು

ಇನ್ನೂ `ಭಕ್ತ ಕಣ್ಣಪ್ಪ’ ಸಿನಿಮಾಗೆ ಮಹಾಭಾರತ ಸರಣಿ ಖ್ಯಾತಿಯ ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಲಿದ್ದಾರೆ. ಪರಚೂರಿ ಗೋಪಾಲಕೃಷ್ಣ ಮತ್ತು ಸಾಯಿ ಮಾಧವ್ ಬುರ್ರಾ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಮಣಿಶರ್ಮಾ ಮತ್ತು ಸ್ಟೀಫನ್ ದೇವಸಿ ಅವರ ಪ್ರತಿಭಾವಂತ ಜೋಡಿ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದೆ. ವಿಷ್ಣು ಮಂಚುಗೆ ನಾಯಕಿಯಾಗಿ ನೂಪುರ್ ಸನೋನ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಬಾಲಿವುಡ್ನ ದೊಡ್ಡ ದೊಡ್ಡ ಕಲಾವಿದರು ಬಣ್ಣ ಹಚ್ಚಲಿದ್ದಾರೆ ಎಂಬ ಮಾಹಿತಿ ಇದೆ. ಹವಾಮಾನದ ಕಾರಣದಿಂದ ಈ ಸಿನಿಮಾವನ್ನು ನ್ಯೂಜಿಲೆಂಡ್ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂದಾಜು 150 ಕೋಟಿ ರೂ. ಬಜೆಟ್ನಲ್ಲಿ ಈ ಚಿತ್ರ ತಯಾರಾಗಲಿದೆ ಎಂದು ಸ್ವತಃ ಮಂಚು ವಿಷ್ಣು ತಂದೆ, ಹಿರಿಯ ನಟ ಮೋಹನ್ ಬಾಬು ಹೇಳಿಕೊಂಡಿದ್ದಾರೆ. ಅವಾ ಎಂಟರ್ಟೈನ್ಮೆಂಟ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಜಂಟಿಯಾಗಿ ನಿರ್ಮಿಸಿರುವ ಈ ಪ್ರಾಜೆಕ್ಟ್ ಶೀಘ್ರದಲ್ಲೇ ಚಿತ್ರೀಕರಣವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಕಾಳಹಸ್ತಿಯಲ್ಲಿ ಸಿನಿಮಾದ ಮುಹೂರ್ತ ಮಾಡಲಾಗಿತ್ತು. ‘ಕಣ್ಣಪ್ಪ’ ಸಿನಿಮಾವು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.





