ಕಾಂತಾರ ಮೊದಲ ಅಧ್ಯಾಯದ ಟೀಸರ್ ನೋಡಿ ಸಮಸ್ತ ಸಿನಿಮಾ ಪ್ರೇಮಿಗಳು ಸ್ಟನ್ ಆಗಿ ಹೋಗಿದ್ದಾರೆ. ಹಿಂದೆಂದೂ ಕಾಣದ ವಿಸ್ಮಯಕಾರಿ ಪ್ರಪಂಚಕ್ಕೆ ಕೊಂಡ್ಯೊಯ್ದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಉಘೇ ಉಘೇ ಎನ್ನುತ್ತಿದ್ದಾರೆ. 24 ಗಂಟೆಯಲ್ಲಿ 15 ಮಿಲಿಯನ್ ಮಂದಿ `ಕಾಂತಾರ ಚಾಪ್ಟರ್-2′ ಟೀಸರ್ ನೋಡಿ ಶರಣು ಶರಣೆಂದಿದ್ದಾರೆ. ಅಚ್ಚರಿ ಅಂದರೆ ಇದನ್ನೆಲ್ಲಾ ನೋಡಿ ಗೂಗಲ್ ಕೂಡ ಬೆವತು ನೀರಾಗಿದೆ. ಏನಾಗ್ತಿದೆ ನನ್ನ ಅಂಗಳದಲ್ಲಿ ಎನ್ನುತ್ತಾ ಅರೆಕ್ಷಣ ಕಣ್ಣುಜ್ಜಿಕೊಂಡು ಗೂಗಲ್ ಸಂಸ್ಥೆ, ಕಾಂತಾರ ಟೀಸರ್ ನೋಡಿ ವಾವ್ ಅಂತ ಟ್ವೀಟ್ ಮಾಡಿದೆ. 2024 ಅತ್ಯಂತ ರೋಮಾಂಚನಕಾರಿಯಾಗಿರಲಿದೆ ಎಂದಿದೆ. ಇದಕ್ಕಿಂತ ಇನ್ನೇನು ಬೇಕ್ರಿ ಒಂದು ಸಿನಿಮಾ ಟೀಮ್‍ಗೆ. ಬಹುಷಃ ಇಲ್ಲೇ ಒಂದು ಹೆಜ್ಜೆ ಕಾಂತಾರ ಟೀಮ್ ಗೆಲ್ತು ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ.

ಫಸ್ಟ್ ಲುಕ್ ಟೀಸರ್ ರಿಲೀಸ್ ಆದ್ಮೇಲೆ ಕಾಂತಾರ ಚಾಪ್ಟರ್ 1 ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಕಾಡುಬೆಟ್ಟು ಶಿವಪ್ಪನ ನಯಾ ಲುಕ್ಕು ಹಾಗೂ ಗೆಟಪ್ ಸಮಸ್ತ ಸಿನಿಮಾ ಪ್ರೇಮಿಗಳನ್ನು ದಂಗು ಬಡಿಸಿದೆ. ಕಾಂತಾರ ಶಿವನ ಹೊಸ ಅವತಾರ ಕುತೂಹಲದ ಕೋಟೆಯನ್ನೇ ನಿರ್ಮಿಸಿದೆ. ಒಂದು ಕೈಲಿ ಕೈಯಲ್ಲಿ ತ್ರಿಶೂಲ, ಇನ್ನೊಂದು ಕೈಯಲ್ಲಿ ಜಮದಗ್ನಿಯ ಕೊಡಲಿ ಹಿಡಿದು ದಟ್ಟ ಕಾಡೊಳಗೆ ದರ್ಶನ ನೀಡುವ ಡಿವೈನ್ ಸ್ಟಾರ್ ಪಾತ್ರ, ಅಘೋರಿಯಾ ರೂಪವಾ ಅಥವಾ ಸಾಕ್ಷಾತ್ ಪರಶಿವನ ದರ್ಶನವಾ ಎನ್ನುವ ಅನುಮಾನ ಪ್ರೇಕ್ಷಕರನ್ನ ಒಂಟಿಕಾಲಿನಲ್ಲಿ ನಿಲ್ಲಿಸಿದೆ.

ಚಿತ್ರದ ಮೊದಲ ನೋಟದಲ್ಲಿ ‘ಇದು ಕದಂಬರ ಆಳ್ವಿಕೆಯ ಸಂದರ್ಭದಲ್ಲಿ ಹುಟ್ಟಿಕೊಂಡ ದಂತಕಥೆ’ ಎಂಬುದನ್ನು ತಿಳಿಸಲಾಗಿದೆ. ಕದಂಬರು ಮೂರನೇ ಶತಮಾನದಿಂದ ಆರನೇ ಶತಮಾನದವರೆಗೆ ಆಳ್ವಿಕೆ ನಡೆಸಿದ್ದರು. ಕದಂಬರ ಬಗ್ಗೆ ಹಲವು ದಂತಕಥೆಗಳಿವೆ. ಅದರಲ್ಲಿ ಮುಖ್ಯವಾಗಿ, ರಾಜ ತ್ರಿಲೋಚನ ಕದಂಬ ಶಿವನ ಬೆವರಿನಿಂದ ಹುಟ್ಟಿದವನು ಎಂದು ಹೇಳಲಾಗುತ್ತದೆ. ಇನ್ನೊಂದೆಡೆ ರಾಜ ಮಯೂರವರ್ಮ, ಕದಂಬ ಮರಗಳಿಂದ ಕೂಡಿದ ದಟ್ಟಾರಣ್ಯದಲ್ಲಿ ಜನಿಸಿದ ಎಂಬ ಕಥೆಯೂ ಇದೆ. ಆದರೆ, ಇದು ಇವೆರಡು ಕಥೆಗಳ ಕಾಲಘಟ್ಟದ್ದಾ? ಅಥವಾ ಇನ್ನೂ ವಿಶೇಷವಾಗಿ ಏನಾದರೂ ನಿರೀಕ್ಷಿಸಬಹುದೇ? ಎನ್ನುವ ಕುತೂಹಲ ಹುಟ್ಟಿಸಿದೆ.
‘ಕಾಂತಾರ’ ಚಿತ್ರದಲ್ಲಿ ಶಿವ, ಪಂಜುರ್ಲಿ ಮತ್ತು ಗುಳಿಗ ದೈವದ ಭಿನ್ನ ವಿಭಿನ್ನ ಲುಕ್ ಮತ್ತು ಶೇಡ್ ಗಳಲ್ಲಿ ರಿಷಬ್ ಕಾಣಿಸಿಕೊಂಡಿದ್ದರು. ಇದೀಗ ಪ್ರೀಕ್ವೆಲ್ ನಲ್ಲೂ ಮೊದಲ ಚಿತ್ರವನ್ನೂ ಮೀರಿದ ಹೊಸ ಬಗೆಯ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಗ್ನಿಪರ್ವತದೊಳಗೆ ರಕ್ತಸಿಕ್ತ ಮೈಯಲ್ಲಿ, ಕೈಯಲ್ಲಿ ಕೊಡಲಿ, ತ್ರಿಶೂಲ ಹಿಡಿದು ಹೋರಾಟಕ್ಕೆ ನಿಂತಂತೆ ಕಾಣಿಸಿಕೊಂಡಿರುವ ರಿಷಬ್ ಅವತಾರ ಪರಶುರಾಮನಂತೆ ಕಾಣಿಸುವಂತಿದೆ. ತುಳುನಾಡನ್ನು ಸಮುದ್ರದಿಂದ ಮರಳಿ ಪಡೆದ ಪರಶುರಾಮನ ಕಥೆಯೇ ರೋಮಾಂಚನಕಾರಿ! ಇದೇನಾದರು ಅದಕ್ಕೆ ಸಂಬಂಧ ಪಟ್ಟಿದ್ದಾ? ದೈವಗಳ ಮೂಲಗಳಿಗೆ ಸಂಬಂಧಪಟ್ಟಿದ್ದಾ? ಎಂದು ಯೋಚಿಸುವಂತೆ ಮಾಡಿದೆ.

ಈ ಚಿತ್ರಕ್ಕೆ ‘ಅಧ್ಯಾಯ 1’ ಎಂಬ ಅಡಿಬರಹ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದು ಅಧ್ಯಾಯ 1 ಆದರೆ, ಇನ್ನೂ 2,3 ಹೀಗೆ ಮುಂದುವರಿಯಬಹುದಾ? ಎಂಬ ಪ್ರಶ್ನೆಗೂ ಕಾರಣವಾಗಿದೆ. ಈ ಬಗ್ಗೆ ರಿಷಬ್ ಶೆಟ್ಟಿ, ‘ನೀವೆಲ್ಲ ಈಗಾಗಲೇ ನೋಡಿರುವುದು ಎರಡನೇ ಭಾಗ. ಈಗ ಬರುತ್ತಿರುವುದು ಮೊದಲನೇ ಭಾಗ. ಹೀಗಾಗಿ ‘ಅಧ್ಯಾಯ 1′. ಈ ಸಿನಿಮಾ ಕರಾವಳಿ ಭಾಗಕ್ಕೆ ಸಂಬಂಧಿಸಿದ್ದರಿಂದ ಇಲ್ಲಿಯೇ ಚಿತ್ರೀಕರಣ ಮಾಡುವ ಯೋಚನೆಯಿದೆ. ಜತೆಗೆ ಉಳಿದ ಪಾತ್ರಗಳಿಗೆ ಕಾಸ್ಟಿಂಗ್ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಶುರು ಮಾಡಲಿದ್ದೇವೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಜತೆಗೆ ಬೆಂಗಾಲಿ ಮತ್ತು ಇಂಗ್ಲೀಷ್ ಸೇರಿ ಒಟ್ಟು ಏಳು ‘ಅಧ್ಯಾಯ 1’ ಬಿಡುಗಡೆಯಾಗಲಿದೆ.





