ಈಗಾಗಲೇ ತನ್ನ ಟೈಟಲ್ ಮತ್ತು ಟ್ರೇಲರ್ ಮೂಲಕ ಒಂದಷ್ಟು ಸದ್ದು ಮಾಡುತ್ತಿರುವ ‘ಟಿ.ಆರ್.ಪಿ ರಾಮ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ನವೆಂಬರ್ 3ರಂದು ‘ಟಿ.ಆರ್.ಪಿ ರಾಮ’ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರ್ತಿದೆ. ಹಿರಿಯ ನಟಿ ಮಹಾಲಕ್ಷ್ಮಿ ಕಂಬ್ಯಾಕ್ ಮಾಡ್ತಿರುವ ‘ಟಿ.ಆರ್.ಪಿ ರಾಮ’ ಸಿನಿಮಾದ ‘ಧರೆಗೆ ದೊಡ್ಡವಳು…’ ಎಂಬ ಹಾಡು ಇತ್ತೀಚೆಗೆ ಅನಾವರಣಗೊಂಡಿದೆ. ಲಿಂಗರಾಜು-ರವಿ ಪ್ರಸಾದ್ ಹಾಗೂ ಪ್ರವೀಣ್ ಸೂಡ ಸಾಹಿತ್ಯ ಬರೆದಿರುವ ‘ಟಿ.ಆರ್.ಪಿ ರಾಮ’ ಸಿನಿಮಾದ ತಾಯಿ ಕುರಿತ ಈ ಹಾಡಿಗೆ ಸಾಧು ಕೋಕಿಲ ಧ್ವನಿಯಾಗಿದ್ದಾರೆ. ರಾಜ್ ಗುರು ಹೊಸಕೋಟೆ ಟ್ಯೂನ್ ಹಾಕಿದ್ದಾರೆ.

‘ಟಿ.ಆರ್.ಪಿ ರಾಮ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ವಾಪಾಸಾಗುತ್ತಿರುವುದರ ಬಗ್ಗೆ ಮಾತನಾಡಿದ ಹಿರಿಯ ನಟಿ ಮಹಾಲಕ್ಷ್ಷೀ, ‘30 ವರ್ಷ ಆದ್ಮೇಲೆ ಒಂದೊಳ್ಳೆ ತಂಡದ ಜೊತೆ ಅಭಿನಯಿಸಿರುವ ಖುಷಿ ಇದೆ. ತಾಯಿ ಪಾತ್ರ ಮಾತ್ರವಲ್ಲ, ಇಡೀ ತಂಡ ತಾಯಿ ತರ ನೋಡಿಕೊಂಡರು. ಪ್ರಪಂಚದಲ್ಲಿ ಎರಡು ತರಹದ ಕುಟುಂಬ ಇರುತ್ತದೆ. ಒಂದು ನಾರ್ಮಲ್ ಫ್ಯಾಮಿಲಿ. ಇನ್ನೊಂದು ಅಬ್ ನಾರ್ಮಲ್ ಫ್ಯಾಮಿಲಿ. ಅಬ್ ನಾರ್ಮಲ್ ಫ್ಯಾಮಿಲಿ ಎದುರಿಸುವ ಕಷ್ಟವನ್ನು ಕಟ್ಟಿಕೊಡುವುದೇ ಸಿನಿಮಾ ಕಥೆ. ಇದೊಂದು ಎಮೋಷನಲ್ ಕಥೆ. ಪ್ರತಿಯೊಬ್ಬರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಆ ಪರಿಶ್ರಮಕ್ಕೆ ಬೆಲೆ ಸಿಗಲಿದೆ ಎಂಬ ನಂಬಿಕೆ ಇದೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ಕೊಡುವ ಸಿನಿಮಾ ಇದು’ ಎಂದರು.
‘ಟಿ.ಆರ್.ಪಿ ರಾಮ’ ಸಿನಿಮಾಗೆ ರವಿಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಈ ಚಿತ್ರದ ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. ‘ಅಶುತೋಶ್ ಪಿಕ್ಚರ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣವಾಗಿದೆ. ತಾಯಿ ಪಾತ್ರದಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಪತ್ರಕರ್ತೆಯಾಗಿ ಸ್ಪರ್ಶ ಅಭಿನಯಿಸಿದ್ದಾರೆ. ಸತ್ಯ ಘಟನೆಗಳನ್ನ ಆಧರಿಸಿ ಬರ್ತಿರೋ ‘ಟಿ.ಆರ್.ಪಿ ರಾಮ’ ಸಿನಿಮಾದಲ್ಲಿ ನಿರ್ದೇಶಕ ಕಂ ನಟ ರವಿ ಪ್ರಸಾದ್ ವಿಕೃತ ರಾಮನ ಪಾತ್ರ ಮಾಡಿದ್ದಾರೆ. ನವೆಂಬರ್ 3ಕ್ಕೆ ತೆರೆಗೆ ಬರ್ರುತ್ತಿರುವ ಈ ಸಿನಿಮಾವನ್ನು ಕನ್ನಡದ ಜೊತೆಗೆ ತೆಲುಗು, ಮಲಯಾಳಂ, ತಮಿಳು ಭಾಷೆಗೆ ಡಬ್ ಮಾಡುವ ಪ್ಲಾನ್ ನಲ್ಲಿದೆ ಚಿತ್ರತಂಡ.





