ಮುಂಗಾರು ಮಳೆ ಸಿನಿಮಾದಿಂದ ಮಳೆ ಹುಡುಗಿ ಅಂತಲೇ ಖ್ಯಾತಿ ಪಡೆದ ನಟಿ ಪೂಜಾ ಗಾಂಧಿ ನಾಳೆ ಮದುವೆಯಾಗುತ್ತಿದ್ದಾರೆ. ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಅಡಿಯಿಡಲು ಸಜ್ಜಾಗಿರೋ ತಾಜ್‍ಮಹಲ್ ಚೆಲುವೆ, ಕುವೆಂಪು ಅವರ ಆಶಯದಂತೆ ಮಂತ್ರಮಾಂಗಲ್ಯ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಮದುವೆ ಕರೆಯೋಲೆಯನ್ನ ತಾವೇ ಖುದ್ದಾಗಿ ಕನ್ನಡದಲ್ಲಿ ಬರೆದು ಕನ್ನಡದ ಬಗ್ಗೆ ಅಭಿಮಾನ ಮೆರೆಯುವುದರ ಜೊತೆಗೆ ಮದುವೆಗೆ ಎಲ್ಲರನ್ನೂ ಆಮಂತ್ರಿಸಿದ್ದಾರೆ
ಅಂದ್ಹಾಗೇ, ಮಳೆ ಹುಡುಗಿನಾ ಕೈ ಹಿಡಿಯುತ್ತಿರೋ ಹುಡುಗ ವಿಜಯ್ ಘೋರ್ಪಡೆ. ಬೆಂಗಳೂರಿನಲ್ಲಿ ಲಾಜೆಸ್ಟಿಕ್ ಕಂಪನಿ ಮಾಲೀಕ ರಾಗಿರುವ ವಿಜಯ್ ಹಾಗೂ ಪೂಜಾ ನಡುವೆ ಗೆಳೆತನ ಬೆಳೆದಿತ್ತು. ಸ್ನೇಹದಿಂದ ಶುರುವಾದ ಇವರಿಬ್ಬರ ಆತ್ಮೀಯತೆ ಪ್ರೀತಿಗೆ ತಿರುಗಿ ಬಾಳಬಂಧನಕ್ಕೆ ಒಳಗಾಗುವಂತೆ ಮಾಡಿದೆ. ಕುವೆಂಪುರವರ ಮಂತ್ರಮಾಂಗಲ್ಯಕ್ಕೆ ಮನಸೋತಿರುವ ಇವರಿಬ್ಬರು ನಾಳೆ ಆತ್ಮೀಯರ ಸಮ್ಮುಖದಲ್ಲಿ ವೈವಾಹಿಕ ಬದುಕಿಗೆ ಅಡಿಯಿಡಲಿದ್ದಾರೆ.

ನಟಿ ಪೂಜಾಗಾಂಧಿ ಉತ್ತರ ಪ್ರದೇಶದ ಮೀರತ್ ನವರು. ಪಂಜಾಬಿ ಕುಟುಂಬದ ಹೆಣ್ಣುಮಗಳಾದ ಪೂಜಾ ಈಗ ಕರ್ನಾಟಕದ ಸೊಸೆಯಾಗ್ತಿದ್ದಾರೆ. ಇತ್ತೀಚೆಗೆ ಕನ್ನಡ ಮಾತನಾಡೋದನ್ನ ತುಂಬಾ ಚೆನ್ನಾಗಿ ಕಲ್ತಿದ್ದಾರೆ. ಕನ್ನಡ ಭಾಷೆ, ಕಲೆ, ಸಂಸ್ಕøತಿಯನ್ನ ಅಪಾರವಾಗಿ ಗೌರವಿಸೋ ಈ ಹೆಣ್ಣುಮಗಳು ಕರ್ನಾಟಕದ ಇತಿಹಾಸದ ಬಗ್ಗೆ ಅಧ್ಯಯನ ಶುರುಮಾಡಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ ಮಳೆ ಹುಡುಗಿನಾ ಕೈ ಹಿಡಿಯುತ್ತಿರೋ ವಿಜಯ್. ಹೌದು, ಪೂಜಾಗೆ ಕನ್ನಡ ಓದೋದನ್ನ, ಬರೆಯೋದನ್ನ ಕಲಿಸಿದ್ದು ವಿಜಯ್ ಅವರೇ. ಇದೀಗ ವಿಜಯ್ ಅವರಂತೆ ಪೂಜಾ ಕೂಡ ಲೀಲಾಜಾಲವಾಗಿ ಕನ್ನಡ ಮಾತನಾಡುತ್ತಾರೆ. ಕನ್ನಡಗರಿಂದ ಭೇಷ್ ಎನಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ನಟಿಸಿ ಬೇಡಿಕೆ ಹೆಚ್ಚಿಸಿಕೊಂಡು ಪರಭಾಷೆಯಲ್ಲಿ ಮೆರೆಯುತ್ತಿರುವ ಅದೆಷ್ಟೋ ನಟಿಯರು ಕನ್ನಡ ಮಾತನಾಡಲಿಕ್ಕೆ ಹಿಂಜರಿಯುತ್ತಾರೆ. ಆದರೆ, ಉತ್ತರ ಭಾರತದಿಂದ ಗಾಂಧಿನಗರಕ್ಕೆ ಬಂದು ಕನ್ನಡ ಸಿನಿಮಾಗಳಿಗೆ ಬಣ್ಣ ಹಚ್ಚಿದ ನಟಿ ಪೂಜಾ ಗಾಂಧಿ, ಕನ್ನಡ ಭಾಷೆ ಕಲಿಯೋದಲ್ಲದೇ ಕನ್ನಡಾಂಭೆಯನ್ನ ಗೌರವಿಸುತ್ತಿದ್ದಾರೆ. ಕರ್ನಾಟಕ ಹಾಗೂ ಕನ್ನಡ ಭಾಷೆ ನಂಗೆ ಎಲ್ಲವನ್ನೂ ಕೊಟ್ಟಿದೆ. ಅದಕ್ಕೆ ನಾನೆಂದೆಂದಿಗೂ ಚಿರರುಣಿ ಎನ್ನುವ ಮಳೆ ಹುಡುಗಿ ನೂರ್ಕಾಲ ಸುಖವಾಗಿರಲಿ. ನಾಳೆಯಿಂದ ಹೊಸ ಜೀವನ ಶುರುಮಾಡ್ತಿರುವ ಪೂಜಾಗೆ ಒಳ್ಳೆದಾಗಲಿ. ಅಡ್ವಾನ್ಸ್ ಹ್ಯಾಪಿ ಮ್ಯಾರೀಡ್ ಲೈಫ್ ನಂದಿನಿ





