ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟನಾಗಿ, ಪೋಷಕ ನಟನಾಗಿ ತನ್ನದೇ ಛಾಪು ಮೂಡಿಸಿರುವ ನಟ ತಬಲ ನಾಣಿ ಈಗ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಸಿನಿಮಾವೊಂದು ಬಿಡುಗಡೆಗೆ ಸಿದ್ದವಾಗಿದೆ. ಅಂದಹಾಗೆ, ತಬಲನಾಣಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಈ ಹೊಸ ಸಿನಿಮಾಕ್ಕೆ ‘ನನಗೂ ಹೆಂಡ್ತಿ ಬೇಕು’ ಎಂದು ಟೈಟಲ್ ಇಡಲಾಗಿದೆ. ಅಂಧನೊಬ್ಬ ಮದುವೆಯಾಗಲು ಹೊರಟಾಗ ನಡೆಯುವ ಪ್ರಸಂಗಗಗಳನ್ನು ಹಾಸ್ಯಮಯವಾಗಿ ಹೇಳುವ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಸದ್ದಿಲ್ಲದೆ ಪೂರ್ಣಗೊಂಡಿದೆ. ಸದ್ಯ ‘ನನಗೂ ಹೆಂಡ್ತಿ ಬೇಕು’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ.
ಈ ಹಿಂದೆ ದೇಶಪ್ರೇಮ ಸಾರುವ ‘ಆ್ಯಕ್ಟ್ 370’ ಎಂಬ ಚಿತ್ರ ನಿರ್ದೇಶಿಸಿದ್ದ ಕೆ. ಶಂಕರ್ ಈ ಕಾಮಿಡಿ ಜಾನರ್ ಸಿನಿಮಾವನ್ನು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ‘ಲೈರಾ ಎಂಟರ್ ಟೈನ್ಮೆಂಟ್ ಅಂಡ್ ಮೀಡಿಯಾ’ ಮೂಲಕ ಭರತ್ ಗೌಡ ಮತ್ತು ಸಿ. ರಮೇಶ್ ಜೊತೆಯಾಗಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ನಿರ್ಮಿಸುತ್ತಿರುವ, ಕೆ.ಶಂಕರ್ ನಿರ್ದೇಶನವಿರುವ ಆ ಚಿತ್ರದ ಹೆಸರು ‘ನನಗೂ ಹೆಂಡ್ತಿ ಬೇಕು’ ಸಂಪೂರ್ಣ ಕಾಮಿಡಿ ಜಾನರ್ ಸಿನಿಮಾವಾಗಿದ್ದು, ಮದುವೆಯಾಗಲು ಹೊರಟು ಒಂದು ಹೆಣ್ಣುಕೂಡ ಸಿಗದೇ ಪರಿತಪಿಸುವ ಕುರುಡನ ಪಾತ್ರದಲ್ಲಿ ಹಾಸ್ಯನಟ ತಬಲ ನಾಣಿ ಅವರು ಕಾಣಿಸಿಕೊಂಡಿದ್ದಾರೆ. ತಬಲ ನಾಣಿಗೆ ಎದುರು ಬ್ಯಾಂಕ್ ಜನಾರ್ಧನ್ ಮತ್ತು ಬಾಲು ನಕರಾತ್ಮಕ ಪಾತ್ರದಲ್ಲಿ ರಂಜಿಸಲಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಒಬ್ಬ ಮೂಕಿಯಾಗಿ ನಟಿಸಿದ್ದಾರೆ.
ಉಳಿದಂತೆ ಶೃತಿ, ರಮೇಶ್ ಭಟ್, ಕಿಲ್ಲರ್ ವೆಂಕಟೇಶ್ ಗಣೇಶ್ ರಾವ್, ದೊಡ್ಡ ರಂಗೇಗೌಡ, ಧರ್ಮ, ಕೆಜಿಎಫ್ ಕೃಷ್ಣಪ್ಪ, ಪ್ರಿಯಾಂಕ, ಗಾನವಿ ಮುಂತಾದವರು ‘ನನಗೂ ಹೆಂಡ್ತಿ ಬೇಕು’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಕೆ.ಎಮ್. ಇಂದ್ರ ಸಂಗೀತ ಸಂಯೋಜನೆಯಿದೆ. ಇಡೀ ಚಿತ್ರದ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆಸಲಾಗಿದೆ. ಇದೇ ವರ್ಷಾಂತ್ಯಕ್ಕೆ ‘ನನಗೂ ಹೆಂಡ್ತಿ ಬೇಕು’ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.





