ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಪುತ್ರಿ ನಿವೇದಿತಾ ಶಿವರಾಜಕುಮಾರ್ ಸಿನಿಮಾ ನಿರ್ಮಾಣಕ್ಕಿಳಿದಿರುವುದು ಗೊತ್ತೇ ಇದೆ. ‘ಶ್ರೀ ಮುತ್ತು ಸಿನಿ ಸರ್ವೀಸ್’ನಡಿ ಹೊಸಪ್ರತಿಭೆಗಳಿಗೆ ಅವಕಾಶ ನೀಡಲೆಂದು ಆರಂಭಿಸಿರುವ ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಕೊಡುಗೆ ‘ಫೈರ್ ಫ್ಲೈ’. ಈಗಾಗಲೇ ಪೋಸ್ಟರ್ ಮೂಲಕ ಗಮನಸೆಳೆದಿದ್ದ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ.
ಮೈಸೂರು,ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಅಕ್ಟೋಬರ್ ತಿಂಗಳ ಮೂರನೇ ವಾರದಿಂದ ದ್ವಿತೀಯ ಹಂತದ ಚಿತ್ರೀಕರಣ ಶುರುವಾಗಲಿದೆ. ‘ಫೈರ್ ಫ್ಲೈ’ ಸಿನಿಮಾವನ್ನ ಯುವ ನಟ ವಂಶಿ ಡೈರೆಕ್ಟ್ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ನಾಯಕರಾಗಿಯೂ ಈ ಮೂಲಕ ವಂಶಿ ಕನ್ನಡಕ್ಕೆ ಪರಿಚಯ ಆಗುತ್ತಿದ್ದಾರೆ. ಚಿತ್ರಕ್ಕೆ ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಕೊಡ್ತಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

ಚಿತ್ರದ ನಾಯಕ-ನಿರ್ದೇಶಕ ವಂಶಿ ಈ ಹಿಂದೆ ‘ಪಿ.ಆರ್.ಕೆ ‘ ಸಂಸ್ಥೆಯ ‘ಮಾಯಾಬಜಾರ್’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿಯೇ ಕೆಲಸ ಮಾಡಿದ್ದರು. ಗುರು ದೇಶಪಾಂಡೆ ಅವರ ‘ಪೆಂಟಗನ್’ ಸಿನಿಮಾದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. ನಾಯಕ-ನಿರ್ದೇಶಕ ವಂಶಿಗೆ ಇಲ್ಲಿ ಜಯ್ ರಾಮ್ ಸಹ ನಿರ್ದೇಶಕರಾಗಿಯೇ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕೊಡುತ್ತಿದೆ.





