ಕಿರುತೆರೆಯ ಜನಪ್ರಿಯ ಧಾರಾವಾಹಿ ‘ರಾಮಾಚಾರಿ’ಯಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ಗುರುತಿಸಿಕೊಂಡಿದ್ದ ನಟಿ ರಾಧಾ ಭಗವತಿ, ಈಗ ಕಿಕುತೆರೆಯಿಂದ ಹಿರಿತೆರೆಗೆ ಅಡಿಯಿಡುತ್ತಿದ್ದಾರೆ. ಸದ್ಯ ಸಚಿನ್ ಶೆಟ್ಟಿ ನಿರ್ದೇಶಿಸುತ್ತಿರುವ ‘ವಸಂತಕಾಲದ ಹೂಗಳು’ ಚಿತ್ರಕ್ಕೆ ರಾಧಾ ಭಗವತಿ, ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಮೂಲತಃ ಉತ್ತರ ಕರ್ನಾಟಕದ ಬಿಜಾಪುರ ಮೂಲದ ರಾಧಾ ಭಗವತಿ, ಟೀನೇಜ್ ಪ್ರೇಮಕಥೆ ಹೊಂದಿರುವ ‘ವಸಂತಕಾಲದ ಹೂಗಳು’ ಚಿತ್ರದಲ್ಲಿ ಸುಮಾ ಎಂಬ ಹೆಸರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಚೊಚ್ಚಲ ಸಿನಿಮಾದ ಬಗ್ಗೆ ಮಾತನಾಡುವ ರಾಧಾ ಭಗವತಿ, ‘ಈ ಸಿನಿಮಾದ ಹೆಸರೇ ನನಗೆ ಆಪ್ತವೆನಿಸಿತು. ಇನ್ನು ಕಥೆ ಕೇಳಿದಾಗಲಂತೂ ಮೂರ್ನಾಲ್ಕು ದಿನಗಳ ಕಾಲ ಆ ಗುಂಗಿನಲ್ಲೇ ಇದ್ದೆ. ಖಂಡಿತ ಚಿತ್ರ ನೋಡಿದವರಿಗೆಲ್ಲ ತಮ್ಮ ಕಾಲೇಜು ದಿನಗಳ ನೆನಪು ಮರುಕಳಿಸದೇ ಇರದು. ನಟನೆಗೆ ಹೆಚ್ಚು ಅವಕಾಶ ಇರುವಂತ ಪಾತ್ರ ಸಿಕ್ಕಿದ್ದಕ್ಕೆ ಖುಷಿಯಿದೆ. ಸಿನಿಪ್ರಿಯರ ಪ್ರತಿಕ್ರಿಯೆಗೆ ಕಾತರದಿಂದ ಎದುರು ನೋಡುತ್ತಿದ್ದೇನೆ’ ಎನ್ನುತ್ತಾರೆ ರಾಧಾ ಭಗವತಿ.

ಈಗಾಗಲೇ ‘ವಸಂತಕಾಲದ ಹೂಗಳು’ ಸಿನಿಮಾದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಸಿನಿಮಾದ ಚಿತ್ರೀಕರಣ ಆರಂಭಿಸುವ ಯೋಜನೆಯಲ್ಲಿದೆ ಚಿತ್ರತಂಡ





