ಕಿರುತೆರೆಯ ‘ಪುಟ್ಟಗೌರಿಯ ಮದುವೆ’ ಮತ್ತು ‘ಗಟ್ಟಿಮೇಳ’ ಧಾರಾವಾಹಿಗಳ ಖ್ಯಾತಿಯ ನಟ ರಕ್ಷ್ ರಾಮ್ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾ ‘ಬರ್ಮ’ದ ಮುಹೂರ್ತ ಇತ್ತೀಚೆಗೆ ನೆರವೇರಿತು. ಬೆಂಗಳೂರಿನ ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ‘ಬರ್ಮ’ ಸಿನಿಮಾದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಆರಂಭ ಫಲಕ ತೋರಿದರು. ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು ಹಾಗೂ ನಟ ಧ್ರುವ ಸರ್ಜಾ ಮೊದಲ ದೃಶ್ಯಕ್ಕೆೆ ಆ್ಯಕ್ಷನ್-ಕಟ್ ಹೇಳಿದರು.
ನಿರ್ಮಾಪಕ ಕೆ. ಪಿ. ಶ್ರೀಕಾಂತ್, ನಿರ್ದೇಶಕ ಎ. ಪಿ. ಅರ್ಜುನ್, ನಟ ಧೀರನ್ ರಾಮಕುಮಾರ್, ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಭಾ. ಮ. ಹರೀಶ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆೆ ಆಗಮಿಸಿ ಚಿತ್ರತಂಡಕ್ಕೆೆ ಶುಭ ಕೋರಿದರು.

ಈ ಹಿಂದೆ ಕನ್ನಡದಲ್ಲಿ ‘ಬಹದ್ದೂರ್’, ‘ಭರ್ಜರಿ’, ‘ಭರಾಟೆ’, ‘ಜೇಮ್ಸ್’ ಸಿನಿಮಾಗಳನ್ನು ನಿರ್ದೇಶಿಸಿದ್ದ ಚೇತನ್ ಕುಮಾರ್ ನಿರ್ದೇಶನದ ಐದನೇ ಸಿನಿಮಾ ಇದಾಗಿದೆ. ‘ಬರ್ಮ’ ಎಂದರೆ ಸಂಸ್ಕೃತದಲ್ಲಿ ಬ್ರಹ್ಮ ವಾಸಿಸುವ ಜಾಗ ಎಂಬ ಅರ್ಥವಿದೆ. ಒಂದು ದೇಶಕಕ್ಕೂ ‘ಬರ್ಮ’ ಎಂಬ ಹೆಸರಿದೆ. ಕಥೆಗೆ ಪೂರಕವಾಗಿರುವುದರಿಂದ ಸಿನಿಮಾಕ್ಕೆೆ ‘ಬರ್ಮ’ ಎಂದು ಹೆಸರಿಟ್ಟಿದ್ದೇವೆ ಎಂದಿದೆ ಚಿತ್ರತಂಡ. ಸದ್ಯ ‘ಬರ್ಮ’ ಸಿನಿಮಾದ ಮುಹೂರ್ತ ನೆರವೇರಿಸಿರುವ ಚಿತ್ರತಂಡ ಅಕ್ಟೊಬರ್ ಮೊದಲವಾರದಿಂದ ಚಿತ್ರೀಕರಣ ಆರಂಭಿಸುವ ಯೋಜನೆಯಲ್ಲಿದೆ.





