ಕನ್ನಡ ಚಿತ್ರರಂಗದಲ್ಲಿ ‘ವಿಖ್ಯಾತ್ ಚಿತ್ರ’ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ‘ಪುಷ್ಪಕ ವಿಮಾನ’, ‘ಇನ್ಸ್ ಪೆಕ್ಟರ್ ವಿಕ್ರಂ’, ‘ಮಾನ್ಸೂನ್ ರಾಗ’ದಂತಹ ವಿಭಿನ್ನ ಶೈಲಿಯ ಚಿತ್ರಗಳನ್ನು ಕೊಡುಗೆಯಾಗಿ ನೀಡಿದವರು ನಿರ್ಮಾಪಕ ವಿಖ್ಯಾತ್. ಈಗ ವಿಖ್ಯಾತ್ ತಮ್ಮ ಸಂಸ್ಥೆಯ ನಿರ್ಮಾಣದ ಆರನೇ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ಹೌದು, ನಿರ್ಮಾಪಕ ವಿಖ್ಯಾತ್ ಮೊದಲ ಬಾರಿಗೆ ನಿರ್ದೇಶನದತ್ತ ಮುಖ ಮಾಡುತ್ತಿದ್ದು, ತಮ್ಮ ಪ್ರಥಮ ಪ್ರಯತ್ನದಲ್ಲೇ ಮಲ್ಟಿ ಸ್ಟಾರ್ ಚಿತ್ರ ನಿರ್ದೇಶನಕ್ಕೆ ವಿಖ್ಯಾತ್ ಮುಂದಾಗಿದ್ದಾರೆ. ಇನ್ನು ವಿಖ್ಯಾತ್ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲಿ ಸ್ಟಾರ್ ನಟರಾದ ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಇಬ್ಬರು ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ, ನಟ ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಹೊಸ ಪೋಸ್ಟರನ್ನು ಬಿಡುಗಡೆ ಮಾಡಲಾಗಿದೆ.

ಇನ್ನು ಹೆಸರಿಡದ ಈ ಸಿನಿಮಾದ ಮೊದಲ ಲುಕ್ ಪೋಸ್ಟರಿನಲ್ಲಿ, ಇಬ್ಬರು ನಾಯಕರನ್ನಾಗಿಟ್ಟುಕೊಂಡು ದೇಶ ಕಾಯುವ ವೀರಯೋಧರ ಕುರಿತಾಗಿ ಒಂದಷ್ಟು ಮಹತ್ವದ ವಿಚಾರಗಳನ್ನು ಹೇಳಲು ಹೊರಟಿರುವಂತೆ ತೋರಿಸಲಾಗಿದೆ. ಜೊತೆಗೆ ಪೋಸ್ಟರಿನಲ್ಲಿ ವೀರ ಸೇನಾನಿಗಳ ನಡುವೆ ನಾಯಕರಿಬ್ಬರೂ ವಿದೂಷಕರ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.ಸದ್ಯ ಈ ಪೋಸ್ಟರ್ ಒಂದಷ್ಟು ಕುತೂಹಲಗಳನ್ನು ಹುಟ್ಟುಹಾಕಿದ್ದು, ಸಿನಿಮಾದ ಕುರಿತಾಗಿರುವ ಹೆಚ್ಚಿನ ಪ್ರಶ್ನೆಗಳಿಗೆ ಇನ್ನಷ್ಟೇ ಈಗ ಉತ್ತರ ಸಿಗಬೇಕಾಗಿದೆ.





