ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ `170’ನೇ ಚಿತ್ರ ಸೆಟ್ಟೇರಿದೆ. ತಿರುವನಂತಪುರಂನಲ್ಲಿ ಮುಹೂರ್ತ ನೆರವೇರಿಸಿರುವ ಚಿತ್ರತಂಡ ತಲೈವಾ ಸಿನಿಮಾಗೆ ಚಾಲನೆ ನೀಡಿದ್ದಾರೆ. ವಿಘ್ನ ವಿನಾಶಕ ಗಣೇಶ-ಲಕ್ಷ್ಮಿ-ಸರಸ್ವತಿ ಮೂರು ದೇವರುಗಳ ಫೋಟೋ ಇಟ್ಟು ಪೂಜೆ ಸಲ್ಲಿಸಿರುವ ಪಡೆಯಪ್ಪ ಅಂಡ್ ಟೀಮ್ `ತಲೈವರ್-170′ ಸಿನಿಮಾಗೆ ಕೃಪಕಟಾಕ್ಷ ಬೇಡಿದೆ.
`ತಲೈವರ್-170′ ಮೇಲೆ ನಿರೀಕ್ಷೆ ಹೆಚ್ಚಿದೆ. ಜೈಲರ್ ಸಿನಿಮಾದ ಮೂಲಕ ಸ್ಟ್ರಾಂಗ್ ಕಂಬ್ಯಾಕ್ ಮಾಡಿರುವ ತಲೈವಾ, ತಾವು ಬಾಕ್ಸ್ ಆಫೀಸ್ ಬಾಸ್ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಜೈ ಭೀಮ್ ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶನ ಚಿತ್ರಕ್ಕಿದ್ದು, ದಕ್ಷಿಣ ಭಾರತದ ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಲೈಕಾ `ತಲೈವರ್-170′ ಚಿತ್ರಕ್ಕೆ ಬಂಡವಾಳ ಹೂಡ್ತಿದೆ. ಖೈದಿ ನಂಬರ್ 150, 2.0, ದರ್ಬಾರ್ ನಂತರ ಮತ್ತೊಮ್ಮೆ ಬಾಷಾಗೆ ಲೈಕಾ ಬಂಡವಾಳ ಹೂಡ್ತಿದೆ. ಇನ್ನೂ ಹೆಸರಿಡದ ಈ ಸಿನಿಮಾವನ್ನು `ತಲೈವರ್-170′ ಹೆಸರಿನಿಂದ ಕರೆಯಲಾಗುತ್ತಿದ್ದು, ಇಂದು ಮುಹೂರ್ತ ನೆರವೇರಿಸುವ ಮೂಲಕ ಚಿತ್ರಕ್ಕೆ ಅಧಿಕೃತ ಚಾಲನೆ ಕೊಟ್ಟಿದೆ.
ಇಂದು ಬೆಳಗ್ಗೆಯಷ್ಟೇ ತಲೈವಾ ಸೇರಿದಂತೆ `ತಲೈವರ್ 170′ ಚಿತ್ರದ ಪಾತ್ರಧಾರಿಗಳ ಫಸ್ಟ್ ಲುಕ್ ಬಿಡುಗಡೆಗೊಳಿಸಲಾಗಿತ್ತು. ಬ್ಲಾಕ್ ಆ್ಯಂಡ್ ವೈಟ್ ಥೀಮ್‍ನಲ್ಲಿ ಪೋಸ್ಟರ್ ಡಿಸೈನ್ ಮಾಡಿ ಎಲ್ಲಾ ಕಲಾವಿದರ ಮೊದಲ ನೋಟವನ್ನ ಅನಾವರಣ ಮಾಡಲಾಗಿತ್ತು. ಸಂಜೆಯೊತ್ತಿಗೆ ಸಿನಿಮಾ ಮುಹೂರ್ತದ ಫೋಟೋಗಳನ್ನು ಲೈಕಾ ಸಂಸ್ಥೆ ತಮ್ಮ ಸೋಷಿಯಲ್ ಪುಟದಲ್ಲಿ ಹಂಚಿಕೊಂಡಿದೆ.
`ತಲೈವರ್-170′ ಚಿತ್ರದಲ್ಲಿ ಅತೀ ದೊಡ್ಡ ತಾರಾಬಳಗವೇ ಇದೆ. ಜೈಲರ್ ಸಿನಿಮಾದಂತೆ ಇಲ್ಲಿಯೂ ಕೂಡ ಸೌತ್-ನಾರ್ತ್ ಸೂಪರ್ ಸ್ಟಾರ್ಸ್ ಗಳ ಸಮಾಗಮವಾಗ್ತಿದೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ತಲೈವರ್-170' ಚಿತ್ರದ ಭಾಗವಾಗ್ತಿದ್ದಾರೆ. ಭರ್ತಿ 32 ವರ್ಷಗಳ ನಂತರ ಶಿವಾಜಿ ದಿ ಬಾಸ್ ಜೊತೆ ಸ್ಕ್ರೀನ್ ಶೇರ್ ಮಾಡಲು ಶೆಹೆನ್ ಷಾ ರೆಡಿಯಾಗಿದ್ದಾರೆ. `ಹಮ್’ ಸಿನಿಮಾದ ನಂತರ ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರು ಒಂದೇ ಸ್ಕ್ರೀನ್ ಮೇಲೆ ಒಟ್ಟಾಗಿ ಕಾಣಿಸಿಕೊಳ್ತಿದ್ದಾರೆ. ಇವ್ರೊಟ್ಟಿಗೆ ರಾಣಾ ದಗ್ಗುಬಾಟಿ, ಫಾಹದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ದುಶಾರ ವಿಜಯನ್ ಸೇರಿದಂತೆ ಹಲವರು ತಲೈವರ್-170 ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ. ಶೂಟಿಂಗ್ ಹೊರಡಲು ಫಿಲ್ಮ್ ಟೀಮ್ ಸಜ್ಜಾಗಿದ್ದು, ಹೈವೋಲ್ಟೇಜ್ ಆ್ಯಕ್ಷನ್ ಜೊತೆ ಕಣಕ್ಕಿಳಿಯಲಿದೆ. ಇನ್ಮುಂದೆ ಒಂದೊಂದೆ ಅಪ್‍ಡೇಟ್ ಲೈಕಾ ಅಂಗಳದಿಂದ ಹೊರಬೀಳಲಿದೆ.






