ನಟ ಅನಿರುದ್ಧ್ ಜತ್ಕರ್ ನಾಯಕನಾಗಿ ಅಭಿನಯಿಸಿರುವ ‘ಶೆಫ್ ಚಿದಂಬರ’ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೇ ಪೂರ್ಣಗೊಂಡಿತ್ತು. ಇದೀಗ ‘ಶೆಫ್ ಚಿದಂಬರ’ ಸಿನಿಮಾದ ಡಬ್ಬಿಂಗ್ ಕೆಲಸಗಳಿಗೆ ಚಿತ್ರತಂಡ ಚಾಲನೆ ನೀಡಿದೆ. ಪ್ರಸ್ತುತ ಲೂಪ್ ಸ್ಟುಡಿಯೋದಲ್ಲಿ ಚಿತ್ರಕ್ಕೆ ಮಾತಿನ ಜೋಡಣೆ (ಡಬ್ಬಿಂಗ್) ನಡೆಯುತ್ತಿದೆ. ನಾಯಕ ನಟ ಅನಿರುದ್ದ್ ಮಾತಿನ ಮೂಲಕ ತಮ್ಮ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.
ಡಾರ್ಕ್ ಕಾಮಿಡಿ ಜಾನರ್ ‘ಶೆಫ್ ಚಿದಂಬರ’ ಚಿತ್ರದಲ್ಲಿ ಅನಿರುದ್ಧ್ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಅನಿರುದ್ಧ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ‘ಲವ್ ಮಾಕ್ಟೇಲ್’ ಖ್ಯಾತಿಯ ರೆಚೆಲ್ ಡೇವಿಡ್ ಅಭಿನಯಿಸಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಕೆ. ಎಸ್. ಶ್ರೀಧರ್, ಶಿವಮಣಿ ಮುಂತಾದವರು ‘ಶೆಫ್ ಚಿದಂಬರ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಹಿಂದೆ ‘ರಾಘು’ ಚಿತ್ರವನ್ನು ನಿರ್ದೇಶಿಸಿದ್ದ ಎಂ. ಆನಂದರಾಜ್ ‘ಶೆಫ್ ಚಿದಂಬರ’ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ದಮ್ತಿ ಪಿಕ್ಚರ್ಸ್’ ಲಾಂಛನದಲ್ಲಿ ರೂಪ ಡಿ. ಎನ್ ನಿರ್ಮಿಸುತ್ತಿರುವ ‘ಶೆಫ್ ಚಿದಂಬರ’ ಚಿತ್ರಕ್ಕೆ ಗಣೇಶ್ ಪರಶುರಾಮ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಉದಯಲೀಲ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನವಿದೆ. ಚಿತ್ರದ ಹಾಡುಗಳಿಗೆ ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನವಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿರುವ ‘ಶೆಫ್ ಚಿದಂಬರ’ ಸಿನಿಮಾವನ್ನು ಇದೇ ವರ್ಷಾಂತ್ಯಕ್ಕೆ ಅಥವಾ ಹೊಸ ವರ್ಷದ ಆರಂಭದಲ್ಲಿ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.





