‘ಹಂಸಿನಿ ಕ್ರಿಯೇಷನ್ಸ್’ ಬ್ಯಾನರ್ ನಡಿಯಲ್ಲಿ ರಾಘವೇಂದ್ರ ಡಿ. ಜಿ ನಿರ್ಮಿಸಿ ನಾಯಕ ನಟನಾಗಿ ಅಭಿನಯಿಸಿರುವ, ಕ್ರಷ್ಣ ನಾಡ್ಪಾಲ್ ನಿರ್ದೇಶನದ ‘ವೇಷ’ ಚಿತ್ರದ ಟ್ರೇಲರ್ ಇತ್ತೀಚೆಗೆ ‘ಎ2’ ಮ್ಯೂಸಿಕ್ ಯು-ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

ನಟ ಮರಿಟೈಗರ್ ವಿನೋದ್ ಪ್ರಭಾಕರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್. ಎಂ ಸುರೇಶ್ ಹಾಗೂ ಸಂಭಾಷಣೆಕಾರ ಮಾಸ್ತಿ ಮೊದಲಾದವರು ‘ವೇಷ’ ಚಿತ್ರದ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಜೀವನದಲ್ಲಿ ಎಲ್ಲರೂ ಒಂದಲ್ಲಾ ಒಂದು ರೀತಿ ‘ವೇಷ’ ಹಾಕುತ್ತಾರೆ. ನಮ್ಮ ಚಿತ್ರದಲ್ಲೂ ಹಾಗೆ, ನಾಯಕನಿಗೆ ಯಾವುದೊ ಒಂದು ಸಂದರ್ಭ ‘ವೇಷ’ ಹಾಕುವ ಹಾಗೆ ಮಾಡುತ್ತದೆ. ಅದು ಹೇಗೆ ಎಂಬುದೇ ‘ವೇಷ’ ಸಿನಿಮಾದ ಕಥಾಹಂದರ ಎಂಬುದು ಚಿತ್ರತಂಡ ನೀಡುವ ವಿವರಣೆ.
ಈಗಾಗಲೇ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಕೃಷ್ಣ ನಾಡ್ಪಾಲ್ ‘ವೇಷ’ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ನಾಯಕ – ನಿರ್ಮಾಪಕ ರಾಘವೇಂದ್ರಗೆ ‘ವೇಷ’ ಸಿನಿಮಾದಲ್ಲಿ ನಿಧಿ ಮಾರೋಲಿ, ಸೌಖ್ಯ ಗೌಡ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಜಯ್ ಶೆಟ್ಟಿ, ರಾಜ ಅಲಿ, ಶಿಲ್ಪ ಕುಮಟಾ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.





